(ವರದಿ:ಎನ್.ಎಂ.ಸುರೇಶ್)
ಕನಕಪುರ: ಹೆತ್ತ ಕರುಳಿನ ಮಮತೆಯನ್ನೇ ಮರೆತು ಪಾಪಿಗಳು ಯಾರೊ ಒಂದೂವರೆ ತಿಂಗಳ ಗಂಡು ಮಗುವೊಂದನ್ನು ದೇವಾಲಯದ ಬಳಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಕನಕಪುರ ತಾಲೂಕಿನ ಗಟ್ಟಿಗುಂಡ ಗ್ರಾಮದಲ್ಲಿ ನಡೆದಿದೆ.
ಶನಿವಾರ ತಾಲೂಕಿನ ಕೋಡಿಹಳ್ಳಿ ಹೋಬಳಿ ಗಟ್ಟಿಗುಂಡ ಗ್ರಾಮದ ಸೇವಾಲಾಲ್ ದೇವಾಲಯದ ಬಳಿ ಮಗುವನ್ನು ಇಟ್ಟು ಪೋಷಕರು ಪರಾರಿಯಾಗಿದ್ದಾರೆ.
ಮುಂಜಾನೆ 5 ಗಂಟೆ ಸಮಯದಲ್ಲಿ ಬಿಜ್ಜಳ್ಳಿ ರಸ್ತೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮಗುವನ್ನು ದೇವಾಲಯದ ಬಳಿ ಇರಿಸಿ ಕುಳಿತುಕೊಂಡು,ಸ್ವಲ್ಪ ಹೊತ್ತಿನ ನಂತರ ಗ್ರಾಮದ ಬಳಿ ನಿಂತಿದ್ದು, ನಂತರ ಅಲ್ಲಿಂದ ಕಣ್ಮರೆಯಾಗಿದ್ದಾರೆ.
ದೇವಾಲಯದ ಬಳಿ ಮಗುವಿನ ಆಳುವ ಶಬ್ದ ಕೇಳಿ ಸ್ಥಳೀಯರು ಅಲ್ಲಿಗೆ ಧಾವಿಸಿದ್ದಾರೆ.
ಈ ವೇಳೆ ನೇರಳೆ ಬಣ್ಣದ ಮಗುವಿನ ಮಲಗುವ ಹಾಸಿಗೆಯಲ್ಲಿ ಸುತ್ತಿ ಇರಿಸಲಾಗಿದ್ದ ಮಗುವನ್ನು ಕಂಡು ಸ್ಥಳೀಯರು ಕೋಡಿಹಳ್ಳಿ ಪೋಲಿಸ್ ಹಾಗೂ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ರಾಮನಗರ ಬಾಲಮಂದಿರ ಅಧಿಕಾರಿಗಳು, ಪೋಲಿಸರು ಮಗುವನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಆರೈಕೆ ಮಾಡಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.
ದೇಗುಲದ ಬಳಿ ಚಿಕ್ಕಮಗುವನ್ನು ಗ್ರಾಮದ ಹಲವಾರು ಮಹಿಳೆಯರು ತಮಗೆ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಅದಕ್ಕೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲಕ್ಷ್ಮಣ್ ಯಾವುದೇ ಕಾರಣಕ್ಕೂ ಈ ರೀತಿ ಸಿಕ್ಕ ಮಗುವನ್ನು ಯಾರಿಗೂ ಕೊಡುವಂತಿಲ್ಲ, ಕಾನೂನಾತ್ಮಕವಾಗಿ ಮಗುವಿನ ಆರೋಗ್ಯ ಪರಿಶೀಲಿಸಿ ಅದನ್ನು ಬಾಲ ಮಂದಿರದಲ್ಲಿಟ್ಟು ರಕ್ಷಣೆ ಮಾಡಲಾಗುವುದು ಎಂದು ಜನರಿಗೆ ಮನವರಿಕೆ ಮಾಡಿದರು.
ಸ್ಥಳದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನ ಕಚೇರಿ ಸಿಬ್ಬಂಧಿ ಮಗುವನ್ನು ರಕ್ಷಣೆ ಮಾಡಿ ಬಾಲ ಮಂದಿರಕ್ಕೆ ರವಾನಿಸಿದ್ದಾರೆ.
