ಕುಶಾಲನಗರ: ಈ ಬಾರಿ ಬೇಸಿಗೆ ಜೋರಾಗಿದ್ದು, ಬಿಸಿಲು ಮತ್ತು ಸೆಕೆಯಿಂದಾಗಿ ಜನರು ಬಸವಳಿದರೆ,ಇನ್ನೊಂದೆಡೆ
ಬಿಸಿಲ ಝಳಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಲೇ ಇದೆ.
ಕಾವೇರಿ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ,ಆದರೆ ಮೇನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಬಹುದು.
ಬಿಸಿಲ ಝಳಕ್ಕೆ ಕಾವೇರಿ ನದಿಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಹರಿವು ಇಳಿಮುಖವಾಗುತ್ತಿದೆ. ನದಿ ತಟದಲ್ಲಿರುವ ಕುಶಾಲನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರಿನ ಸರಬರಾಜು ಮೂಲಕ್ಕೆ ಬಹುತೇಕ ಕಾವೇರಿ ನದಿಯನ್ನೇ ಅವಲಂಬಿಸಿವೆ. ಇದರೊಂದಿಗೆ ಕೊಳವೆಬಾವಿ ವ್ಯವಸ್ಥೆಯ ಮೂಲಕವೂ ಗ್ರಾಮಗಳಿಗೆ ನೀರು ಪೂರೈಕೆ ಮಾಡುತ್ತಿದ್ದರೂ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ.
ಕುಶಾಲನಗರ ಪಟ್ಟಣ ವ್ಯಾಪ್ತಿಯ ಮುಳ್ಳು ಸೋಗೆ ಗ್ರಾಮ ಭಾಗಶಃ ಒಳಗೊಂಡಂತೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಮೂರು ದಿನಗಳಿಗೊಮ್ಮೆ 28 ಲಕ್ಷ ಲೀ. ನೀರು ಸರಬರಾಜು ಮಾಡಲಾಗುತ್ತಿದೆ.
ಬೈಚನಹಳ್ಳಿ ಬಳಿ ಜಲಾಗಾರದ ಮೂಲಕ ನದಿಯಿಂದ ನೀರು ಪಂಪ್ ಮಾಡಿ ಶುದ್ದೀಕರಿಸಿ ವಿತರಿಸುವ ವ್ಯವಸ್ಥೆಯಿದೆ.
ಮಾರ್ಚ್ ತಿಂಗಳಲ್ಲಿ ನೀರಿನ ಹರಿವು ಇಳಿಮುಖಗೊಳ್ಳುತ್ತಿದ್ದಂತೆ ಮುನ್ನೆಚ್ಚರಿಕೆಯಾಗಿ ಪಂಪ್ ಹೌಸ್ ಬಳಿ ನದಿಗೆ ಅಡ್ಡಲಾಗಿ ಮರಳು ಮೂಟೆಗಳನ್ನು ಹಾಕಿ ನೀರು ಶೇಖರಣೆಗೆ ಕ್ರಮವಹಿಸಲಾಗಿತ್ತು.ನಂತರ ಮಳೆಯಾದ ಹಿನ್ನೆಲೆಯಲ್ಲಿ ಆತಂಕ ದೂರವಾಗಿದೆ. ಆದರೂ ಬಿರು ಬಿಸಿಲಿನ ವಾತಾವರಣ ಹೀಗೇ ಮುಂದು ವರಿದರೆ ಸಮಸ್ಯೆ ಗ್ಯಾರಂಟಿ.
ಕಾವೇರಿ ಮತ್ತು ಹಾರಂಗಿ ನದಿ ಸಂಗಮವಾಗುವ ಕೂಡಿಗೆ ವ್ಯಾಪ್ತಿಯಿಂದ ಕುಶಾಲನಗರಕ್ಕೆ 24*7 ಕುಡಿಯುವ ನೀರು ಪೂರೈಸುವ 40 ಕೋಟಿ ರೂ. ವೆಚ್ಚದ ಅಮೃತ್ 2.0 ಯೋಜನೆ ಕಾಮಗಾರಿ ಶೇ.70 ಮಾತ್ರ ಪೂರ್ಣಗೊಂಡಿದೆ.
ಮೇ 2024ರಲ್ಲಿ ಆರಂಭವಾದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬೇಕಾಗುವುದರಿಂದ ಈ ಬೇಸಿಗೆಯಲ್ಲಿ ನೀರಿನ ವ್ಯವಸ್ಥೆ ದೊರೆ ಯುವುದಿಲ್ಲ.
ಕೂಡಿಗೆ ಗ್ರಾಮದ ಬಳಿ ಕಾವೇರಿ ನದಿ ಹಾಗೂ ಹಾರಂಗಿ ನದಿ ಕೂಡುವ ಜಾಗದಲ್ಲಿ ಕುಶಾಲನಗರ ಪಟ್ಟಣ ಹಾಗೂ ಪಿರಿಯಾಪಟ್ಟಣದ ನೀರಿನ ಬೇಡಿಕೆಗೆ ಅನುಗುಣವಾಗಿ ಕಾಮೆನ್ ಜಾಕ್ವೆಲ್ ಕಂ ಪಂಪ್ ಹೌಸ್ ನಿರ್ಮಾಣದ ಮೂಲಕ ಮುಂದಿನ 30 ವರ್ಷಗಳ ಸುಮಾರು 65,500 ಜನಸಂಖ್ಯೆಗೆ ಅವಶ್ಯವಿರುವ 11.60 ಎಂ.ಎಲ್.ಡಿ ನೀರಿನ ಬೇಡಿಕೆಗೆ ಅನು ಗುಣವಾಗಿ ಯೋಜನೆಯನ್ನು ವಿನ್ಯಾಸಮಾಡಲಾಗಿದೆ.
ಕಾಮಗಾರಿಯಡಿ ದಿಂಡಗಾಡು ಗ್ರಾಮದ ಬಳಿ ನೂತನ ಮೂಲ ಸ್ಥಾವರ ನಿರ್ಮಿಸಿ ಜಾಕ್ವೆಲ್ ಕಂ ಪಂಪ್ ಹೌಸ್ನಲ್ಲಿ 2150 ಎಚ್.ಪಿ. ಸಾಮರ್ಥ್ಯದ ಪಂಪಿಂಗ್ ಮೆಷಿನರಿ ಅಳವಡಿಕೆ, ಜಾಕ್ವೆಲ್ ಕಂ ಪಂಪ್ ಹೌಸ್ನಿಂದ ನೀರು ಶುದ್ದೀಕರಣ ಘಟಕದವರೆಗೆ ಸುಮಾರು 7.0 ಕಿ.ಮೀ ಉದ್ದಕ್ಕೆ 406 ಮಿ.ಮೀ ವ್ಯಾಸದ ಎಂ. ಎಸ್ ಕೊಳವೆ ಸಾಲು ಅಳವಡಿಕೆ, 5.5 ಎಂ. ಎಲ್.ಡಿ ಸಾಮರ್ಥ್ಯದ ನೀರು ಶುದ್ದೀಕರಣ ಘಟಕ ನಿರ್ಮಾಣ, 10.0 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ, ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು 20.0 ಕಿ.ಮೀ ಉದ್ದದ ಎಚ್ಡಿಪಿಇ ವಿತರಣಾ ಕೊಳವೆ ಮಾರ್ಗವನ್ನು ಅಳವಡಿಸಿ 2,102 ಸಂಖ್ಯೆಯ ಮನೆಗಳಿಗೆ ನಲ್ಲಿ ಸಂಪರ್ಕವನ್ನು ಒದಗಿಸುವ ಯೋಜನೆ ಇದಾಗಿದೆ. ಹೆಚ್ಚುವರಿ ಪ್ರಸ್ತಾವನೆಗೆ ಅನುನೋದನೆ ದೊರೆತ ಬಳಿಕ ಮತ್ತಷ್ಟು ವಿಸ್ತಾರಗೊಳಿಸುವ ಯೋಜನೆ ಒಳಗೊಂಡಿದೆ.
