ಮೈಸೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ಕುಮಾರಿ ಮಾಧುರಿ ಅವರ ನಿವಾಸಕ್ಕೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಧ್ಯಕ್ಷರಾದ ಡಾ: ಪುಷ್ಪ ಅಮರನಾಥ್ ಅವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಕು: ಮಾಧುರಿ ಅವರ ತಾಯಿ ಸರಿತಾ ಅವರು ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದು, ಮಗಳ ವಿದ್ಯಾಭ್ಯಾಸಕ್ಕೆ ಬೇಕಿರುವ ಪೂರಕ ಸಾಮಗ್ರಿಗಳನ್ನು ಖರೀದಿಸಲು ಗೃಹಲಕ್ಷ್ಮಿ ಯೋಜನೆ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪ ಅಮರನಾಥ್,
ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬದಲಾವಣೆಯ ಬೆಳಕಾಗಿದೆ. ಇದಕ್ಕೆ ಅನೇಕ ಫಲಶೃತಿಗಳು ನಮ್ಮ ಕಣ್ಮುಂದೆ ಇವೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯ ಹಣದ ಸಹಾಯದಿಂದ ಮಾಧುರಿ ಎಂಬ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ 2ನೇ ಸ್ಥಾನ ಪಡೆದಿರುವುದು ಕೂಡಾ ಒಂದು ಉದಾಹರಣೆಯಾಗಿದೆ ಎಂದು ತಿಳಿಸಿದರು.
ಈಕೆಯಂತೆ ಅನೇಕ ಮಕ್ಕಳ ಬದುಕಿನಲ್ಲಿ ಗ್ಯಾರಂಟಿ ಯೋಜನೆಗಳು ಬೆಳಕಾಗಿದೆ. ಕೆಲವು ಮಾತ್ರ ಎಲ್ಲರ ಕಣ್ಣಿಗೆ ಕಂಡರೆ, ಅನೇಕ ಫಲಾನುಭವಿಗಳ ಕಥೆ ಎಲೆಮರೆಯಾಗಿಯೇ ಉಳಿಯುತ್ತವೆ. ಇಂತಹ ಫಲಶೃತಿಗಳು ಕಣ್ಣಮುಂದೆ ಬಂದಾಗೆಲ್ಲ, ಸರ್ಕಾರಕ್ಕೆ ಸಾರ್ಥಕತೆಯ ಭಾವ ಮೂಡುತ್ತದೆ ಎಂದು ಪುಷ್ಪ ಅಮರನಾಥ್ ಹೇಳಿದರು.
ಇಂತಹ ಯೋಜನೆ ರೂಪಿಸುವಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಶ್ರಮ ಅಪಾರವಾಗಿದೆ ಎಂದು ಕೊಂಡಾಡಿದರು.
ಈ ವೇಳೆ ಮೈಸೂರು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅರುಣ್ ಕುಮಾರ್ ಗಣ್ಯರಾದ ಲೋಕೇಶ್ ಮತ್ತಿತರರು ಹಾಜರಿದ್ದರು.
