ಮೈಸೂರು: ಔಷಧಿಗಳನ್ನು ಸಲಹಾ ಚೀಟಿ ಇಲ್ಲದೆ ಮಾರುವಂತಿಲ್ಲ,ಮಾರಾಟ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ.
ಔಷಧ ಮಾರಾಟ ಅಂಗಡಿಗಳು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರ ಅನುಸೂಚಿ ಎಚ್, ಎಚ್ 1ಮತ್ತು ಎಕ್ಸ್ ಅಡಿಯಲ್ಲಿ ಬರುವ ಮತ್ತು ಬರಿಸುವ, ಅಮಲುಕಾರಕ, ರೋಗನಿರೋಧಕ ಮತ್ತು ಇತರೆ ಔಷಧಿಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ಮಾರಾಟ ಮಾಡುವುದು ಕಂಡುಬಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ನಾರ್ಕೋ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಜಿ ಅವರುಎಚ್ಚರಿಕೆ ನೀಡಿದರು.
ಅವರು ಬುಧವಾರ ನ್ಯೂ ಸ್ಯಾಯಜಿರಾವ್ ರಸ್ತೆಯಲ್ಲಿರುವ ರಘುಲಾಲ್ ಔಷಧ ಮಾರಾಟ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಔಷಧ ಮತ್ತು ಕಾಂತಿ ವರ್ಧಕ ನಿಯಮ 1940ರ ಅನುಸೂಚಿ
H, H1 ಮತ್ತು X ಅಡಿ ಬರುವ ಔಷಧಗಳ ಮಾರಾಟದ ಬಿಲ್ ಗಳು,ವೈದ್ಯರ ಸಲಹಾ ಚೀಟಿಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು ಅಮಲುಕಾರಕ ರೀತಿಯ ಔಷಧಿಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ಖರೀದಿಸಿ ಯುವ ಜನತೆ ಮಾದಕ ವಸ್ತುಗಳ ಬಳಕೆಯ ಜಾಲದಲ್ಲಿ ಸಿಲುಕುತ್ತಿದ್ದಾರೆ. ಔಷಧ ಮಾರಾಟ ಮಳಿಗೆಗಳು ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ನೀಡಲಾಗುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.
ಔಷಧ ಮಾರಾಟ ಅಂಗಡಿಗಳ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿ H, H1 ಮತ್ತು X ಅಡಿ ಬರುವ ಔಷಧಿಗಳ ಖರೀದಿಗೆ ವೈದ್ಯರ ಸಲಹಾ ಚೀಟಿ ಕಡ್ಡಾಯ ಎಂದು ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.
ಅಲ್ಪ್ರಜೋಲಮ್, ಕೊಡೈನ್, ಟಪೆಂಟಾಲ್ (Alprazolam, codeine, tapentadol) ಸೇರಿದಂತೆ ಒಟ್ಟು 50 ವಿದಧ ಔಷಧಿಗಳಿವೆ ಅವುಗಳ ಸ್ಟಾಕ್, ಮಾರಾಟ, ವೈದ್ಯರ ಸಲಹಾ ಚೀಟಿ ಹಾಗೂ ಬಿಲ್ ಗಳ ದಾಖಲೆಗಳನ್ನು ಔಷಧಿ ಮಾರಾಟ ಮಳಿಗೆಗಳು ಇಡಬೇಕು. ಅಧಿಕಾರಿಗಳು ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಹಾಜರುಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಜಿಲ್ಲೆಯಲ್ಲಿ ಬಹಳಷ್ಟು ಔಷಧಿ ಮಾರಾಟ ಕೇಂದ್ರಗಳಿವೆ, ಎಲ್ಲವನ್ನೂ ಔಷಧೀಯ ನಿಯಂತ್ರಕರು ಪರಿಶೀಲಿಸುವುದು ಕಷ್ಟಯ, ಪೊಲೀಸ್ ಇಲಾಖೆಯಿಂದಲೂ ಪರಿಶೀಲನೆ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಸಹಾಯಕ ಔಷಧ ನಿಯಂತ್ರಕರಾದ ಆಶಾ ಲತಾ ಹಾಗೂ ವಾಸೀಂ ಶರೀಫ್ ಈ ವೇಳೆ ಹಾಜರಿದ್ದರು.
