ಮೈಸೂರು: ಮನೆ ಕಟ್ಟಲು ಪಡೆದ 10.5 ಲಕ್ಷ ಸಾಲಕ್ಕೆ 14.5 ಲಕ್ಷ ರೂ ಬಡ್ಡಿ ಹಾಕಿ ರೈತನಿಗೆ ಕಿರುಕುಳ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಜನಸ್ಮಾಲ್ ಫೈನಾನ್ಸ್ ವಿರುದ್ಧ ಕರ್ನಾಟಕ ರಾಜ್ಯ ರೈತಸಂಘದವರು ಪ್ರತಿಭಟನೆ ನಡೆಸಿದರು.
ನಗರದ ಕೆ ಡಿ ರಸ್ತೆಯ ಸಿಗ್ನಲ್ ಜಂಕ್ಷನ್ ಬಳಿ ಇರುವ ಜನಸ್ಮಾಲ್ ಫೈನಾನ್ಸ್ ಕಚೇರಿ ಎದುರು ಸೋಮವಾರ ರೈತಸಂಘದ ನೂರಾರು ಕಾರ್ಯಕರ್ತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತಸಂಘದ ಮೈಸೂರು ತಾಲ್ಲೂಕು ಅಧ್ಯಕ್ಷ ಪ್ರಭಾಕರ್ ಮಾತನಾಡಿ, ತಾಲ್ಲೂಕಿನ ಹಳೇ ರಾಮನಹಳ್ಳಿಯ ರೈತ ಸಿದ್ದರಾಜು 5 ವರ್ಷದ ಹಿಂದೆ ಜನಸ್ಮಾಲ್ ಫೈನಾನ್ಸ್ನ ಸೇಲ್ಸ್ ಸಿಬ್ಬಂದಿ ಮಾತಿಗೆ ಮರುಳಾಗಿ ಮನೆ ಕಟ್ಟಲು 10.5 ಲಕ್ಷ ಸಾಲ ಪಡೆದಿದ್ದರು. ಆದರೆ ಅವರ ಕೈಗೆ ಸಿಕ್ಕಿದ್ದು ಕೇವಲ 9.80 ಲಕ್ಷ. ಉಳಿದ 70 ಸಾವಿರ ರೂಗಳನ್ನು ಪ್ರೋಸೆಸಿಂಗ್ ಚಾರ್ಜ್ ಎಂದು ಕಡಿತ ಮಾಡಲಾಗಿದೆ ಎಂದು ತಿಳಿಸಿದರು.
ಸಾಲ ಪಡೆದು 4 ವರ್ಷಗಳಾಗಿವೆ. ಈಗಾಗಲೇ ಸಿದ್ದರಾಜು 10.5 ಲಕ್ಷ ಅಸಲು ಹಣವನ್ನು ಫೈನಾನ್ಸ್ಗೆ ಪಾವತಿ ಮಾಡಿದ್ದಾರೆ. ಆದರೂ ಇನ್ನೂ 14.5 ಲಕ್ಷ ಹಣ ಕಟ್ಟಿ, ಇಲ್ಲದಿದ್ದರೆ ಮನೆ ಖಾಲಿ ಮಾಡಿ ಎಂದು ಬ್ಯಾಂಕಿನ ಸಿಬ್ಬಂದಿ ಸಿದ್ದರಾಜು ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಜು ಕೆಲ ದಿನಗಳ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದರು. ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಆದಾಗ್ಯೂ ಫೈನಾನ್ಸ್ ಸಿಬ್ಬಂದಿ ಪದೇ ಪದೇ ಅವರ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಮನೆಯಿಂದ ಹೊರ ಹಾಕುತ್ತೇವೆ ಎಂದು ಧಮಕಿ ಹಾಕುವುದು, ಮನೆ ಖಾಲಿ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆಎಂದು ಪ್ರಭಾಕರ್ ಕಿಡಿಕಾರಿದರು.
ಸಿದ್ದರಾಜು ಕುಟುಂಬ ಬಡವರು, ಇಷ್ಟೊಂದು ಬಡ್ಡಿಯನ್ನು ಭರಿಸುವ ಶಕ್ತಿ ಅವರಿಗಿಲ್ಲ. ಬಡ್ಡಿ ಕಡಿಮೆ ಮಾಡಿ ಎಂದು ಪದೇ ಪದೇ ಮನವಿ ಮಾಡಿದರೂ ಫೈನಾನ್ಸ್ ಸ್ಪಂದಿಸುತ್ತಿಲ್ಲ. ಈಗಾಗಲೇ ಅಸಲು ಹಣ ಕಟ್ಟಿಸಿಕೊಂಡಿದ್ದಾರೆ. ಆತನ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಿ ಮನೆಯ ದಾಖಲೆಗಳನ್ನು ಹಿಂದಿರುಗಿಸಬೇಕು ಮತ್ತು ಸಾಲ ತೀರುವಳಿ ಪತ್ರವನ್ನೂ ನೀಡಬೇಕು. ಇಲ್ಲದಿದ್ದಲ್ಲಿ ಫೈನಾನ್ಸ್ ಮುಂದೆ ಹೋರಾಟ ಮುಂದುವರಿಸುತ್ತೇವೆ ಎಂದು ರೈತಸಂಘ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡರಾದ ಮಂಡಕಳ್ಳಿ ಮಹೇಶ, ಚಂದ್ರಶೇಖರ, ರಾಘವೇಂದ್ರ, ಉಮೇಶ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
