ಹುಣಸೂರು: ರಾಜ್ಯ ಸರ್ಕಾರ ಪ್ರಕಟ ಮಾಡಿರುವ ಜಿಲ್ಲಾ ಪಂಚಾಯತ್ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಕರೆ ನೀಡಿದ್ದ ಹುಣಸೂರು ಬಂದ್ ಭಾಗಶಃ ಯಶಸ್ವಿಯಾಯಿತು.
ಜಿಲ್ಲಾ ಪಂಚಾಯತ್ ಮೀಸಲಾತಿ ಹೋರಾಟ ಸಮಿತಿಯು ಈ ಬಂಧಗೆ ಕರೆ ನೀಡಿತ್ತು. ಹುಣಸೂರು ಪಟ್ಟಣದಲ್ಲಿ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಸಾರಿಗೆ ಬಸ್ ಗಳು ವಿರಳವಾಗಿ ಸಂಚರಿಸಿದವು. ಆದರೆ ಶಾಲಾ ಕಾಲೇಜು ಎಂದಿನಂತೆ ತೆರೆದಿದ್ದವು.
ಜಿಲ್ಲಾ ಪಂಚಾಯತ್ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರು ಹಾಗೂ ಎಸ್ ಸಿ ಸಮುದಾಯದವರು ಸೇರಿದಂತೆ ಸಾರ್ವಜನಿಕರು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹುಣಸೂರಿಗೆ ಭೇಟಿ ನೀಡಿದ ಸಂಸದರು ಶಾಸಕರು ಮತ್ತು ಮಾಜಿ ಶಾಸಕರಿಗೆ ಸಮಿತಿಯ ಸದಸ್ಯರು ಮನವಿ ಪತ್ರ ಸಲ್ಲಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಪ್ರಕಟ ಮಾಡಿರುವ ಜಿಲ್ಲಾ ಪಂಚಾಯತ್ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿಗೆ ಸುಮಾರು 56 ಸಾವಿರ ಮತದಾರರು ಇರುವ ಪರಿಶಿಷ್ಟ ಜಾತಿ ಸಮಾಜದವರಿಗೆ ಒಂದೇ ಒಂದು ಮೀಸಲಾತಿಯನ್ನು ಪ್ರಕಟಿಸದೆ ಈ ಸಮಾಜವನ್ನು ಸಾಮಾಜಿಕ ಮತ್ತು ರಾಜಕೀಯ ವಲಯದಿಂದ ದೂರ ಇಟ್ಟಿದ್ದಾರೆ ಎಂದು ಮುಖಂಡರು ಆರೋಪಿಸಿದರು ಕೂಡಲೇ ಈ ಅಸಮಾನತೆಯನ್ನು ಸರಿಪಡಿಸುವಂತೆ ಆಗ್ರಹಿಸಿದರು.
