ಢಾಕಾ: ಬಾಂಗ್ಲಾದೇಶದಲ್ಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾಗಿ ಬಕ್ರೀದ್ ಹಬ್ಬಕ್ಕೆ ಖುಷಿಯಿಂದ ತೆರಳುತ್ತಿದ್ದ 15 ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಈದ್ ಅಲ್-ಅಧಾ ಆಚರಣೆಗಾಗಿ ತಮ್ಮ ಕುಟುಂಬಗಳನ್ನು ಸೇರಲು ತಾಯ್ನಾಡಿಗೆ ಹೊರಟಿದ್ದ ಬಡ ದಿನಗೂಲಿ ಕಾರ್ಮಿಕರು ಮಸಣ ಸೇರುವಂತಾಯಿತು.
ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ವಾಯುವ್ಯಕ್ಕೆ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ತಂಗೈಲ್ ಜಿಲ್ಲೆಯ ಸೊರಾಟೊಯಿಲ್ ಹೆದ್ದಾರಿಯಲ್ಲಿ ಸೋಮವಾರ ನುಸುಕಿನ ಜಾವ 5 ಗಂಟೆಯಲ್ಲಿ ಈ ಅಪಘಾತ ಸಂಭವಿಸಿದೆ.
ಕಬ್ಬಿಣದ ಸರಳುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಒಂದರಲ್ಲಿ ಹಬ್ಬದ ರಜೆಗೆ ಮನೆಗೆ ತೆರಳಲು ಪ್ರಯಾಣಿಕರು ಟ್ರಕ್ ನಲ್ಲಿ ಖುಷಿಯಿಂದ ಪ್ರಯಾಣಿಸುತ್ತಿದ್ದರು.
ಈ ಟ್ರಕ್ ಢಾಕಾದಿಂದ ಉತ್ತರ ಪ್ರಾಂತ್ಯಗಳ ಕಡೆಗೆ ಚಲಿಸುತ್ತಿದ್ದಾಗ, ಸೊರಾಟೊಯಿಲ್ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಕಬ್ಬಿಣದ ಸರಳುಗಳ ಭಾರ ಮತ್ತು ವಾಹನದ ಉರುಳಿದ್ದರಿಂದ 15 ಜನರು ಸ್ಥಳದಲ್ಲೇ ಮೃತಪಟ್ಟರೆಂದು ಪೊಲೀಸ್ ಅಧಿಕಾರಿ ಫುವಾದ್ ಹೊಸೈನ್ ತಿಳಿಸಿದ್ದಾರೆ.
ಮುಂಜಾನೆ ಭೀಕರ ಶಬ್ದ ಕೇಳುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಟ್ರಕ್ ಹಾಗೂ ಕಬ್ಬಿಣದ ಸರಳುಗಳ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ರಕ್ಷಿಸಲು ಪ್ರಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
