(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಕತ್ತಲ ಮನೆಯಲ್ಲಿ ವಾಸ ಮಾಡುತ್ತಿದ್ದ ಇಬ್ಬರು ವೃದ್ದೆಯರ ಮನೆಗೆ ಪೇದೆಯೊಬ್ಬರು ವಿದ್ಯುತ್ ಸಂಪರ್ಕ ಕೊಡಿಸಿ ಮನೆಗೆ ಬೆಳಕಾಗಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಜಾರಿಗೆ ತಂದಿರುವ ಆಸರೆ ಕಾರ್ಯಕ್ರಮದಿಂದ ಪ್ರಭಾವಿತರಾಗಿ ಎರಡು ಬಡ ಕುಟುಂಬಗಳಿಗೆ ಆಸರೆ ನೀಡಿದ ಪೊಲೀಸ್ ಕುಮಾರಸ್ವಾಮಿ ಅವರ ಈ ಕಾರ್ಯಕ್ಕೆ ನಗರದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಚಾಮರಾಜನಗರ ತಾ/ಜಿಲ್ಲೆ ಪೂರ್ವ ಠಾಣೆ ವ್ಯಾಪ್ತಿಯ ಆಲೂರು ಗ್ರಾಮಕ್ಕೆ ಭೇಟಿ ನೀಡಿದ ಪೇದೆ ಕುಮಾರಸ್ವಾಮಿ ಅವರು ಇಬ್ಬರು ವೃದ್ಧೆಯರ ಕಷ್ಟ ಸುಖಗಳನ್ನು ವಿಚಾರಿಸಿದ್ದಾರೆ.
ಆಗ ನಮಗೆ ಯಾರು ದಿಕ್ಕಿಲ್ಲ,ಬೆಳಕೂ ಇಲ್ಲ, ಕಗ್ಗತ್ತಲಿನಲ್ಲಿ ವಾಸಿಸುತ್ತಿದ್ದೇವೆ, ನಮಗೆ ವಿದ್ಯುತ್ ಸಂಪರ್ಕವಿಲ್ಲದೆ ಪ್ರತಿನಿತ್ಯ ಸೀಮೆ ಎಣ್ಣೆದೀಪ, ಮುಂಬತ್ತಿಯಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.
ವೃದ್ದೆಯರ ಮಾತಿಗೆ ಮರುಗಿ ಅವರಿಬ್ಬರ ಮನೆಗೆ ತಮ್ಮ ಸ್ವಂತ ಹಣದಿಂದ 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ಕುಮಾರಸ್ವಾಮಿ ಮಾನವೀಯತೆ ಮರೆದಿದ್ದಾರೆ.ಅವರ ಈ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದ್ದಾರೆ.
