ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿ ದಾಳಿಯಿಂದ ಆದ ಹಾನಿಗೆ ಕ್ಷಮೆ ಯಾಚಿಸುತ್ತೇವೆ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.
ನಮ್ಮ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ದಾಳಿಯ ನಂತರ ಸಂಭವಿಸಿದ ಕ್ಷಿಪಣಿ ಸಂಘರ್ಷದಲ್ಲಿ ಅರಬ್ ರಾಷ್ಟ್ರಗಳಿಗೆ ಆದ ಹಾನಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.
ಇರಾನ್ ಪರವಾಗಿ ನಾನು ನೆರೆಹೊರೆಯ ರಾಷ್ಟ್ರಗಳಲ್ಲಿ ಆದ ಹಾನಿಗೆ ಕ್ಷಮೆ ಕೋರುತ್ತೇನೆ,ಆದರೆ ನಮ್ಮ ಮೇಲೆ ಯಾರೇ ದಾಳಿ ಮಾಡಿದರೂ ನಾವು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.ಜತೆಗೆ ಇಸ್ರೇಲ್ ಅಮೇರಿಕಾವನ್ನು ಸುಮ್ಮನೆ ಬಿಡುವುದಿಲ್ಲ ಎಂದೂ ಹೇಳಿದ್ದಾರೆ.
ನಮ್ಮ ಅಕ್ಕಪಕ್ಕದ ರಾಷ್ಟ್ರಗಳ ಮೇಲೆ ಇನ್ನು ಮುಂದೆ ಯಾವುದೇ ಕ್ಷಿಪಣಿ ದಾಳಿ ನಡೆಸುವುದಿಲ್ಲ ಎಂದು ಇರಾನ್ನ ಮಧ್ಯಂತರ ನಾಯಕತ್ವ ಮಂಡಳಿ ನಿರ್ಧರಿಸಿದೆ. ಆದರೆ, ಆ ದೇಶಗಳ ನೆಲದಿಂದ ಇರಾನ್ ಮೇಲೆ ದಾಳಿ ನಡೆದರೆ ಮಾತ್ರ ತಿರುಗೇಟು ನೀಡುವುದಾಗಿ ಪೆಜೆಶ್ಕಿಯಾನ್ ಹೇಳಿದ್ದಾರೆ.
ಫೆಬ್ರವರಿ 28 ರಂದು ಅಮೆರಿಕ-ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬಸ್ಥರು ಹತರಾಗಿದ್ದರು. ಇದಕ್ಕೆ ಪ್ರತಿಕಾರವಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳು ದುಬೈ, ಅಬುಧಾಬಿ, ಕತಾರ್ ಮತ್ತು ಬಹ್ರೇನ್ನಂತಹ ಗಲ್ಫ್ ರಾಷ್ಟ್ರಗಳಿಗೂ ತಗುಲಿತ್ತು.
ಸೌದಿ ಅರೇಬಿಯಾದ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಅವರು “ತಪ್ಪು ಲೆಕ್ಕಾಚಾರ ಬೇಡ” ಎಂದು ಇರಾನ್ಗೆ ಎಚ್ಚರಿಕೆ ನೀಡಿದ್ದು, ಸೌದಿ ಅರೇಬಿಯಾದ ತೈಲ ಕ್ಷೇತ್ರಗಳ ರಕ್ಷಣೆ ನಮಗೆ ಗೊತ್ತಿದೆ ಎಂದು ಹೇಳಿದ್ದಾರೆ.
