ಭಟ್ಕಳ: ರಕ್ಷಕರೇ ಭಕ್ಷಕರಾದರೆ ಹೇಗೆ ಏನಾಗಲಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಜನರಿಗೆ ರಕ್ಷಣೆ ಕೊಡಬೇಕಾದ ಪಿಎಸ್ಐ ಒಬ್ಬರು ಈಗ ಕಂಬಿ ಎಣಿಸುವಂತಾಗಿದೆ.
ಈಗಿನ್ನೂ ಪ್ರಪಂಚ ಅರಿಯಬೇಕಾದ ಮುಗ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಿಎಸ್ಐ ಅರೆಸ್ಟ್ ಆಗಿದ್ದಾರೆ.
ಕಾರವಾರದ ಸಮೀಪದ ಮಂಕಿ ಪೊಲೀಸ್ ಠಾಣೆಯ ಪಿಎಸ್ಐ ಅಭಿನಂದನ್ ಗೌಡ ಎಂಬವರನ್ನು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಭಟ್ಕಳ ಪೊಲೀಸರು ಬಂಧಿಸಿದ್ದಾರೆ.
ಅಭಿನಂದನ್ ಗೌಡ ರಾಮನಗರ ಜಿಲ್ಲೆ ಕನಕಪುರ ತಾಲೂಕಿನವರು.
ಯಲ್ಲಾಪುರ ಮೂಲದ 16 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡು ಆಗಾಗ ಸಲಿಗೆಯಿಂದ ಮಾತುಕತೆ ಆಡುತ್ತಿದ್ದರಂತೆ.
ಅದು ಹೇಗೊ ಬಾಲಕಿಯನ್ನ ಪುಸಲಾಯಿಸಿ ಬಟ್ಕಳಕ್ಕೆ ಕರೆತಂದು ಲಾಡ್ಜ್ ನಲ್ಲಿ ಇರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ
ಅಪ್ರಾಪ್ತೆ ನೀಡಿದ ದೂರಿನ ಮೇರೆಗೆ ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅಭಿನಂದನ್ ಗೌಡ ಅವರನ್ನು ಪೋಕ್ಸೊ ಕಾಯ್ದೆಯಡಿ ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದು ಪೊಕ್ಸೊ ಪ್ರಕರಣ ವಾಗಿರುವುದರಿಂದ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.
ಅಪ್ರಾಪ್ತೆಯನ್ನೂ ವಿಚಾರಣೆ ಮಾಡುತ್ತಿದ್ದಾರೆ.ಲಾಡ್ಜ್ ನಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ.ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.ಪಿಎಸ್ಐ ತಪ್ಪು ಮಾಡಿದ್ದಾರೊ ಇಲ್ಲವೊ ಗೊತ್ತಾಗಲಿದೆ.,
