ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ನೀಡದಿರುವುದು ಖಂಡನೀಯ ಎಂದು
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ ಹೇಳಿದ್ದಾರೆ.
ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಆಡಳಿತ ಹಾಗೂ ಸಮಾಜಮುಖಿ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬ್ರಾಹ್ಮಣ ಸಮುದಾಯವನ್ನು ಸಚಿವ ಸಂಪುಟ ರಚನೆಯಲ್ಲಿ ಕಡೆಗಣಿಸಿರುವುದು ಸಮುದಾಯದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳಿಗೂ ನ್ಯಾಯಯುತ ಅವಕಾಶ ಮತ್ತು ಸಮಾನ ಪ್ರಾತಿನಿಧಿತ್ವ ದೊರೆಯಬೇಕು. ಆದರೆ ನೂತನ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮಾಜದ ಪ್ರತಿನಿಧಿತ್ವಕ್ಕೆ ಅವಕಾಶ ನೀಡದಿರುವುದು ಸಮುದಾಯದ ಆಶೋತ್ತರಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ವಿಷಾದಿಸಿದ್ದಾರೆ.
ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಸಚಿವ ಸಂಪುಟ ವಿಸ್ತರಣೆ ಹಾಗೂ ವಿವಿಧ ನಿಗಮ-ಮಂಡಳಿಗಳ ನೇಮಕಾತಿಗಳಲ್ಲಿ ಬ್ರಾಹ್ಮಣ ಸಮಾಜಕ್ಕೆ ಸೂಕ್ತ ಸ್ಥಾನಮಾನ ಮತ್ತು ನ್ಯಾಯಸಮ್ಮತ ಪ್ರತಿನಿಧಿತ್ವ ನೀಡಬೇಕು ಎಂದು ಡಿ.ಟಿ.ಪ್ರಕಾಶ್
ಆಗ್ರಹಿಸಿದ್ದಾರೆ.
ಬ್ರಾಹ್ಮಣ ಸಮಾಜದ ಭಾವನೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
