ಮೈಸೂರು: ಮೈಸೂರು ದಸರಾ ಮಹೋತ್ಸವವು ಹಲವು ಶತಮಾನಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದ್ದು, ಇಂದು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ವೈಭವದ ಪ್ರತೀಕವಾಗಿ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ.
ನಾಡಹಬ್ಬ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ಪ್ರತಿವರ್ಷ ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ದಸರಾ ಮಹೋತ್ಸವದ ಸಿದ್ಧತೆಗಳು ಕೊನೆಯ ಕ್ಷಣದಲ್ಲಿ, ಕೆಲವೇ ದಿನಗಳ ಮುನ್ನ ತರಾತುರಿಯಲ್ಲಿ ನಡೆಯುತ್ತಿರುವುದು ಸರಿ ಕಾಣುವುದಿಲ್ಲ ಎಂದು ವಿಶ್ವಹಿಂದು ಪರಿಷತ್ ನಗರ ಅಧ್ಯಕ್ಷರಾದ ಮಹೇಶ್ ಕಾಮತ್ ತಿಳಿಸಿದ್ದಾರೆ.
ರಸ್ತೆ ದುರಸ್ತಿ, ಪೇಂಟಿಂಗ್, ಮೂಲಸೌಕರ್ಯ, ಸಂಚಾರ ವ್ಯವಸ್ಥೆ, ಪ್ರವಾಸಿಗರ ಸೌಲಭ್ಯಗಳು ಸೇರಿದಂತೆ ಹಲವು ಕೆಲಸಗಳು ಕೊನೆಯ ಕ್ಷಣದಲ್ಲಿ ಕೈಗೆತ್ತಿಕೊಳ್ಳುವುದರಿಂದ ಅನಗತ್ಯ ಒತ್ತಡ ಉಂಟಾಗುವುದರ ಜೊತೆಗೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆ ಉಂಟಾಗುವತ್ತದೆ.
ದಸರಾ ಮಹೋತ್ಸವದ ಸಂದರ್ಭದಲ್ಲಿ ಪಾಸ್ಗಳ ವಿತರಣೆ, ವಿವಿಧ ಉಪಸಮಿತಿಗಳ ರಚನೆ ಮತ್ತು ಅವುಗಳ ಕಾರ್ಯವೈಖರಿ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಕೇಳಿಬರುತ್ತಿವೆ.
ವಿಶೇಷವಾಗಿ ದಸರಾ ಪಾಸ್ಗಳ ದುರುಪಯೋಗ ಅಥವಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಾಗ, ಅಂತಹ ವ್ಯವಸ್ಥೆಯನ್ನು ತಡೆಯಲು ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದು ಅವರು ಪ್ರಕಟಣೆಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ದಸರಾ ಎನ್ನುವುದು ಯಾವುದೇ ಒಂದು ಪಕ್ಷ, ವ್ಯಕ್ತಿ ಅಥವಾ ವರ್ಗಕ್ಕೆ ಸೇರಿದ ಕಾರ್ಯಕ್ರಮವಲ್ಲ. ಇದು ಇಡೀ ಕರ್ನಾಟಕದ ಹೆಮ್ಮೆ ಹಾಗೂ ಮೈಸೂರಿನ ಅಸ್ಮಿತೆ.
ಈ ಹಿನ್ನೆಲೆಯಲ್ಲಿ ಪ್ರತಿವರ್ಷ ದಸರಾ ಸಮೀಪಿಸಿದಾಗ ಮಾತ್ರ ಸಿದ್ಧತೆ ಆರಂಭಿಸುವ ಬದಲು, ಮೈಸೂರಿನಲ್ಲಿ ಶಾಶ್ವತ ದಸರಾ ಪ್ರಾಧಿಕಾರವನ್ನು ರಚಿಸುವ ಅಗತ್ಯವಿದೆ ಎಂದು ಮಹೇಶ್ ಕಾಮತ್ ಅಭಿಪ್ರಾಯ ಪಟ್ಟಿದ್ದಾರೆ.
ಈ ಪ್ರಾಧಿಕಾರದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದ ಜೊತೆಗೆ ಮೈಸೂರು ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳು ಹಾಗೂ ಮೈಸೂರು ಹೋಟೆಲ್ ಉದ್ಯಮ, ಟ್ರಾವೆಲ್ ಉದ್ಯಮ, ಪ್ರವಾಸಿ ಗೈಡ್ಸ್, ಸಾರಿಗೆ, ಸಾಂಸ್ಕೃತಿಕ ಕ್ಷೇತ್ರ ಮತ್ತು ಇತರ ಪ್ರಮುಖ Stakeholdersಗಳನ್ನು ಒಳಗೊಂಡ ಸಮಗ್ರ ವ್ಯವಸ್ಥೆ ಇರಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಾಧಿಕಾರವು ಕನಿಷ್ಠ ಮೂರು ವರ್ಷಗಳ ಅವಧಿಗೆ ದಸರಾ ಮಹೋತ್ಸವದ ಸಮಗ್ರ ಯೋಜನೆಯನ್ನು ರೂಪಿಸಿ, ವರ್ಷಪೂರ್ತಿ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಇರಬೇಕು.
ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು
ದಸರಾ ಪಾಸ್ಗಳಿಗೆ ಸಂಪೂರ್ಣ ಡಿಜಿಟಲ್ ವ್ಯವಸ್ಥೆ, QR Code ಆಧಾರಿತ ಪಾಸ್ ಮತ್ತು ಪ್ರವೇಶ ವ್ಯವಸ್ಥೆ
ಪ್ರವಾಸಿಗರಿಗೆ ಆನ್ಲೈನ್ ಮಾಹಿತಿ ಮತ್ತು ಮಾರ್ಗದರ್ಶನ
ಸಂಚಾರ ಮತ್ತು ಪಾರ್ಕಿಂಗ್ಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ
ಹೋಟೆಲ್, ಪ್ರವಾಸಿ ವಾಹನ ಮತ್ತು ಪ್ರವಾಸಿ ಮಾರ್ಗದರ್ಶಕರ ಸಮನ್ವಯ
ತುರ್ತು ಪರಿಸ್ಥಿತಿಗಳಿಗೆ ಸಮಗ್ರ ನಿರ್ವಹಣಾ ವ್ಯವಸ್ಥೆ
ಪ್ರವಾಸಿಗರ ದೂರು ಮತ್ತು ಸಹಾಯವಾಣಿ
ದಸರಾ ಕಾರ್ಯಕ್ರಮಗಳ ಮುಂಚಿತ ಪ್ರಚಾರ ಮತ್ತು ದೇಶ-ವಿದೇಶಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್
ಮುಂತಾದ ವ್ಯವಸ್ಥೆಗಳನ್ನು ರೂಪಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಈ ವರ್ಷ ಬರಗಾಲದಂತಹ ಪರಿಸ್ಥಿತಿಗಳಿದ್ದರೂ ದಸರಾವನ್ನು ವಿಜೃಂಭಣೆಯಿಂದ ಆಚರಿಸುವುದಾಗಿ ಹಾಗೂ ದಕ್ಷಿಣ ಭಾರತದ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವುದು ಸ್ವಾಗತಾರ್ಹ. ಇಂತಹ ಪ್ರಯತ್ನಗಳ ಜೊತೆಗೆ ದಸರಾವನ್ನು ಆಧುನಿಕ ತಂತ್ರಜ್ಞಾನ ಮತ್ತು ವೃತ್ತಿಪರ ಯೋಜನೆಯೊಂದಿಗೆ ಆಯೋಜಿಸಿದರೆ ಮೈಸೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ.
ದಸರಾ ಮಹೋತ್ಸವ ಮುಗಿದ ತಕ್ಷಣ ಹೊರ ಜಿಲ್ಲೆಗಳಿಂದ ಬಂದಿರುವ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವು ವ್ಯವಸ್ಥೆಗಳು ಹಿಂದಿರುಗುತ್ತವೆ. ಆದರೆ ದಸರಾ ನಂತರದ ವಾರಾಂತ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸಂಚಾರ, ಪಾರ್ಕಿಂಗ್ ಹಾಗೂ ಇತರ ವ್ಯವಸ್ಥೆಗಳಲ್ಲಿ ತೊಂದರೆ ಉಂಟಾಗುತ್ತದೆ, ಆದ್ದರಿಂದ ದಸರಾ ಅವಧಿ ಮಾತ್ರವಲ್ಲದೆ ದಸರಾ ನಂತರದ ಪ್ರವಾಸೋದ್ಯಮವನ್ನೂ ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸುವ ಅಗತ್ಯವಿದೆ.
ದಸರಾ ಕೇವಲ ಹತ್ತು ದಿನಗಳ ಕಾರ್ಯಕ್ರಮವಾಗಬಾರದು. ಮೈಸೂರು ವರ್ಷವಿಡೀ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸೋದ್ಯಮ ನಗರವಾಗಬೇಕು ಎಂದು ಕಾಮತ್ ಆಶಿಸಿದ್ದಾರೆ.
ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ, ಸೇಂಟ್ ಫಿಲೋಮಿನಾ ಚರ್ಚ್, ಜಗನ್ಮೋಹನ ಅರಮನೆ ಸೇರಿದಂತೆ ನಗರದ ವಿವಿಧ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ರೀತಿಯಲ್ಲಿ ವರ್ಷಪೂರ್ತಿ ಪ್ರವಾಸೋದ್ಯಮ ಕ್ಯಾಲೆಂಡರ್ ರೂಪಿಸಬೇಕು. ದಸರಾವನ್ನು ಮೈಸೂರಿನ 365 ದಿನಗಳ ಪ್ರವಾಸೋದ್ಯಮದ ಪ್ರಮುಖ ಬ್ರ್ಯಾಂಡ್ ಆಗಿ ಬಳಸಿಕೊಳ್ಳಬೇಕು.
ಆದ್ದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಶಾಶ್ವತ ದಸರಾ ಪ್ರಾಧಿಕಾರ ರಚಿಸಿ, ರಾಜಕೀಯ ಅಥವಾ ತಾತ್ಕಾಲಿಕ ವ್ಯವಸ್ಥೆಗಿಂತ ವೃತ್ತಿಪರ, ಪಾರದರ್ಶಕ ಮತ್ತು ದೀರ್ಘಾವಧಿಯ ಯೋಜನೆಯ ಮೂಲಕ ಮೈಸೂರು ದಸರಾವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಮಹೇಶ್ ಕಾಮತ್ ಕೋರಿದ್ದಾರೆ.
ಈ ವರ್ಷದ ಮೈಸೂರು ದಸರಾ ಮಹೋತ್ಸವವು ಯಶಸ್ವಿಯಾಗಿ, ವಿಜೃಂಭಣೆಯಿಂದ ಹಾಗೂ ಯಾವುದೇ ಅಡಚಣೆಗಳಿಲ್ಲದೆ ನೆರವೇರಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ
ಕೆ ಮಹೇಶ ಕಾಮತ್ ಪ್ರಾರ್ಥಿಸಿದ್ದಾರೆ.
