ಬೆಂಗಳೂರು: ಶಾಸಕರನ್ನು ಸಮಾಧಾನ ಪಡಿಸಲು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಹಾಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಹೇಳಿದ್ದಾರೆ.
ರಾಜ್ಯ ಸರ್ಕಾರದ ಹಣಕಾಸು ಇಲಾಖೆ ಹೆಚ್ಚುವರಿ ವೆಚ್ಚದ ಬಗ್ಗೆ ಎಚ್ಚರಿಕೆ ನೀಡುತ್ತಿರುವ ಸಂದರ್ಭದಲ್ಲೆ ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸಲು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಾಗೂ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನಗಳನ್ನು ನೀಡಲು ಮುಂದಾಗಿರುವುದು ರಾಜ್ಯದ ಜನತೆಯ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುವ ಕ್ರಮವಾಗಿದೆ ಎಂದು ಅವರು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ಹಣಕಾಸು ಶಿಸ್ತಿನ ಕುರಿತು ಹಣಕಾಸು ಇಲಾಖೆ ಎಚ್ಚರಿಕೆ ನೀಡಿರುವುದನ್ನು ಸ್ವತಃ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದ 2026-27ರ ಬಜೆಟ್ನಲ್ಲಿ 97,448 ಕೋಟಿ ಹಣಕಾಸು ಕೊರತೆ ಹಾಗೂ 22,957 ಕೋಟಿ ಆದಾಯ ಕೊರತೆಯನ್ನು ಅಂದಾಜಿಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ 85–90 ನಿಗಮ-ಮಂಡಳಿಗಳಿಗೆ ಸುಮಾರು 5,000–6,000 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ವರದಿಗಳು ಹೊರಬಂದಿವೆ. ಅದರಲ್ಲೂ ಸುಮಾರು ಶೇ.30ರಷ್ಟು ಹುದ್ದೆಗಳನ್ನು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂಬುದು ಮತ್ತಷ್ಟು ಆತಂಕಕಾರಿ ಎಂದು ಜಗದೀಶ್ ವಿ. ಸದಂ ಹೇಳಿದ್ದಾರೆ.
ನಿಗಮ-ಮಂಡಳಿಗಳು ಜನರ ಸೇವೆಗಾಗಿ ಇರಬೇಕೇ ಹೊರತು, ಸಚಿವ ಸ್ಥಾನ ಸಿಗದ ಅಸಮಾಧಾನಿತ ಶಾಸಕರನ್ನು ಸಮಾಧಾನಪಡಿಸುವ ರಾಜಕೀಯ ಪುನರ್ವಸತಿ ಕೇಂದ್ರಗಳಾಗಬಾರದು ಎಂದು ಜಗದೀಶ್ ವಿ. ಸದಂ ತಿಳಿಸಿದ್ದಾರೆ.
ಶಾಸಕರಿಗೆ ನಿಜವಾಗಿಯೂ ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ, ಅವರಿಗೆ ಕ್ಯಾಬಿನೆಟ್ ದರ್ಜೆಯ ಹುದ್ದೆ, ಭತ್ಯೆ ಮತ್ತು ಇತರ ಸೌಲಭ್ಯಗಳನ್ನು ನೀಡುವ ಬದಲು ಅವರ ಕ್ಷೇತ್ರಗಳ ರಸ್ತೆ, ಕುಡಿಯುವ ನೀರು, ಒಳಚರಂಡಿ, ಶಾಲೆ, ಆಸ್ಪತ್ರೆ ಹಾಗೂ ಮೂಲಸೌಕರ್ಯಗಳಿಗೆ ಅಗತ್ಯ ಅನುದಾನ ನೀಡಬೇಕು. ಜನರ ತೆರಿಗೆಯ ಹಣವನ್ನು ರಾಜಕೀಯ ಅಸಮಾಧಾನ ಶಮನಕ್ಕೆ ಬಳಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದ್ದಾರೆ.
