ಬೀಜಿಂಗ್: ಉತ್ತರ ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ 90 ಮಂದಿ ಸಾವನ್ನಪ್ಪಿದ್ದಾರೆ.
ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ಸಂಜೆ ಸ್ಫೋಟ ಸಂಭವಿಸಿದೆ. ಆ ಸಮಯದಲ್ಲಿ ಒಟ್ಟು 247 ಕಾರ್ಮಿಕರು ನೆಲದಡಿ ಕೆಲಸ ಮಾಡುತ್ತಿದ್ದರು.
ಅವರಲ್ಲಿ ಹೆಚ್ಚಿನವರನ್ನು ಶನಿವಾರ ಬೆಳಗ್ಗೆ ಮೇಲೆ ತರಲಾಗಿದೆ.
ನಾಪತ್ತೆಯಾದ ಒಂಬತ್ತು ಮಂದಿ ರಕ್ಷಣೆಗೆ ಸಿಬ್ಬಂದಿ ತೀವ್ರ ಹುಡುಕಾಟ ನಡೆಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ತಿಳಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಕರೆ ನೀಡಿದ್ದಾರೆ.
ಎಲ್ಲಾ ಇಲಾಖೆಗಳು,ಎಲ್ಲಾ ಪ್ರದೇಶಗಳು ಈ ಅವಘಡದಿಂದ ಪಾಠ ಕಲಿಯಬೇಕು. ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು,ನಿರ್ಲಕ್ಷ್ಯ ವಹಿಸಬಾರದು, ದುರಂತಗಳು ಸಂಭವಿಸದಂತೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿನ್ಪಿಂಗ್ ಸಲಹೆ ನೀಡಿದ್ದಾರೆ.
ಸ್ಫೋಟಕ್ಕೆ ಕಾರಣವಾದ ಕಂಪನಿಯ ಮಾಲೀಕನನ್ನು ಕಾನೂನು ಪ್ರಕಾರ ವಶಕ್ಕೆ ಪಡೆಯಲಾಗಿದೆ.
ಗಣಿಯೊಳಗಿನ ಕಾರ್ಬನ್ ಮಾನಾಕ್ಸೈಡ್ ಪ್ರಮಾಣ ಮಿತಿಮೀರಿರುವುದು ಪತ್ತೆಯಾದ ಬಳಿಕ ಸಾವಿನ ಸಂಖ್ಯೆ ವೇಗವಾಗಿ ಏರಿಕೆಯಾಗಿದೆ. ಗಣಿಯೊಳಗೆ ಸಿಲುಕಿದ್ದ ಕೆಲ ಕಾರ್ಮಿಕರ ಸ್ಥಿತಿ ಗಂಭೀರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಶಾಂಕ್ಸಿ ಪ್ರಾಂತ್ಯವು ದೇಶದ ಪ್ರಮುಖ ಕಲ್ಲಿದ್ದಲು ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದೆ.
