ಮೈಸೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬ ಶಾಸಕಿಗೂ ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್ ಸರ್ಕಾರದ ಮಹಿಳಾ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ಮುಖಂಡರಾದ ಡಾ. ಹೇಮಾನಂದೀಶ್ ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳಾ ಸಬಲೀಕರಣ ಬರೀ ಮಾತುಗಳಲ್ಲೇ ಉಳಿದಂತಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಚುನಾವಣೆ ವೇಳೆ ಮಹಿಳಾ ಸಬಲೀಕರಣ, ಸಮಾನ ಅವಕಾಶ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ ಸರ್ಕಾರ ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಗೃಹಲಕ್ಷ್ಮಿ, ಗೃಹಜೋತಿ, ನಾರಿ ಶಕ್ತಿ ಎಂಬ ಘೋಷಣೆಗಳು ಕೇವಲ ಪ್ರಚಾರಕ್ಕೆ ಸೀಮಿತವಾಗಿವೆ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದು ಸರ್ಕಾರದ ನಿಜವಾದ ಮನೋಭಾವ ಅನಾವರಣಗೊಳಿಸಿದೆ.
ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದೆ, ಮಹಿಳೆಯರಿಗೆ ಸಮಾನ ಅವಕಾಶ ನೀಡದೆ ಕೇವಲ ಘೋಷಣೆಗಳ ಮೂಲಕ ರಾಜಕೀಯ ನಡೆಸುತ್ತಿದೆ ಎಂಬ ಭಾವನೆ ರಾಜ್ಯದ ಮಹಿಳೆಯರಲ್ಲಿ ಮೂಡಿದೆ, ಹೀಗಾಗಿ ಅರ್ಹ ಶಾಸಕಿಯರಿಗೆ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಹೇಮಾ ನಂದೀಶ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
