ಮೈಸೂರು: ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ರಸ್ತೆ ಬದಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಬಹಳ ದಿನಗಳಿಂದ ನಿಲ್ಲಿಸಿರುವ ನಿಷ್ಪ್ರಯೋಜಕ ಹಾಗೂ ಅನಾಥ ವಾಹನಗಳನ್ನು ಆಗಸ್ಟ್ 15, ರೊಳಗೆ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆ ಸೂಚಿಸಿದೆ.
ಇಂತಹ ವಾಹನಗಳಿಂದ ಸಾರ್ವಜನಿಕರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಜೊತೆಗೆ ಅಪ್ಪಳಿಸುವ ಸಾಧ್ಯತೆ, ಕಸ ಸಂಗ್ರಹಣೆ ಹೆಚ್ಚಾಗಿ ಸೊಳ್ಳೆ ಮತ್ತು ಇತರ ರೋಗ ಹರಡುವಿಕೆಗೆ ಉತ್ತೇಜನ ದೊರೆಯುತ್ತಿದೆ. ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ ಎಂದು ಪಾಲಿಕೆ ಹೇಳಿದೆ.
ಆದ್ದರಿಂದ ಆಗಸ್ಟ್ 15 ರೊಳಗೆ ಸಂಬಂಧಪಟ್ಟ ಸಾರ್ವಜನಿಕ ಸ್ಥಳಗಳಿಂದ ವಾಹನಗಳನ್ನು ತೆರವುಗೊಳಿಸಬೇಕು. ನಿಗದಿತ ಗಡುವಿನೊಳಗೆ ವಾಹನಗಳನ್ನು ತೆರವುಗೊಳಿಸದಿದ್ದರೆ,ಆ.16 ರಿಂದ ಪಾಲಿಕೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗುರುತಿಸಲಾದ ವಾಹನಗಳ ಮೇಲೆ ನೋಟಿಸ್ ಅಂಟಿಸಲಾಗುತ್ತದೆ.
ನೋಟಿಸ್ ನಲ್ಲಿ ನಿಗದಿಪಡಿಸಿದ ಅವಧಿಯೊಳಗೂ ವಾಹನ ತೆರವುಗೊಳಿಸದಿದ್ದರೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 127ರ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಅನಾಥವಾಗಿ ಅಥವಾ ನಿಗದಿತ ಅವಧಿಗಿಂತ ಹೆಚ್ಚು ಕಾಲ ನಿಲ್ಲಿಸಿರುವ ವಾಹನವನ್ನು ಎಳೆದುಕೊಂಡು ಹೋಗಲು ಅಥವಾ ತೆರವುಗೊಳಿಸಲು ಅವಕಾಶವಿದೆ. ವಾಹನ ತೆರವು ಮತ್ತು ಸಾಗಣೆಗೆ ತಗಲುವ ವೆಚ್ಚವನ್ನು ಸಂಬಂಧಪಟ್ಟ ವಾಹನದ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ.ಹಾಗೂ ಅಗತ್ಯವಿದ್ದಲ್ಲಿ ಇ-ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ.
ಈ ಎಲ್ಲಾ ಕ್ರಮಗಳಿಗೆ ತಗಲುವ ಎಲ್ಲಾ ವೆಚ್ಚಗಳು ಮತ್ತು ಕಾನೂನು ಪರಿಣಾಮಗಳಿಗೆ ಸಂಬಂಧಪಟ್ಟ ವಾಹನದ ನೋಂದಾಯಿತ ಮಾಲೀಕರೇ ಜವಾಬ್ದಾರರಾಗಿರುತ್ತಾರೆ.
ಆದ್ದರಿಂದ ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಈ ಪ್ರಕಟಣೆಯನ್ನು ಗಂಭೀರವಾಗಿ ಪರಿಗಣಿಸಿ, ಆಗಸ್ಟ್ 15 ರೊಳಗೆ ವಾಹನಗಳನ್ನು ತೆರವುಗೊಳಿಸುವ ಮೂಲಕ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದ್ದಾರೆ.
