ಮೈಸೂರು: ಮಕ್ಕಳಿಗೆ ಆಟಿಕೆ ನೀಡುವುದಾಗಿ ವ್ಯಕ್ತಿ ಮಹಿಳೆಯನ್ನು ತನ್ನ ಮನೆಗೆ ಕರೆದು, ಆಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ನಗರದಲ್ಲಿ ನಡೆದಿದೆ.
ಸಂಬಂಧ ಎನ್.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ 57 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಶಿವಾಜಿ ರಸ್ತೆಯ ನಿವಾಸಿ 26 ವರ್ಷದ ಗೃಹಿಣಿ ಆ.3ರಂದು ಸಂಜೆ 4 ಗಂಟೆಗೆ ತಮ್ಮ ಮಗುವನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿದ್ದಾಗ ಅವರ ಮನೆಯ ಮೊದಲ ಮಹಡಿಯಲ್ಲಿ ವಾಸವಿರುವ 57 ವರ್ಷದ ವ್ಯಕ್ತಿ, ಮಕ್ಕಳಿಗೆ ಬಹಳ ಆಟಿಕೆಗಳಿವೆ ಬಂದು ತೆಗೆದುಕೊಂಡು ಹೋಗಿ ಎಂದು ಕರೆದಿದ್ದಾನೆ.
ಅದಕ್ಕೆ ಮಹಿಳೆ ಕೆಳಗೆ ಎಸೆಯಿರಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಆತ, ಕೆಳಗೆ ಹಾಕಿದರೆ ಒಡೆದು ಹೋಗುತ್ತೆ, ನೀವೇ ಮೇಲೆ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾನೆ.
ನಂತರ ಮಹಿಳೆ ಆತನ ಮನೆಯ ಬಾಗಿಲಲ್ಲಿ ನಿಂತು ಆಟಿಕೆಗಳನ್ನು ನೀಡುವಂತೆ ಕೇಳಿದ್ದಾರೆ. ತಕ್ಷಣ ಗೃಹಿಣಿಯನ್ನು ಒಳಗೆ ಎಳೆದುಕೊಂಡು ಗಟ್ಟಿಯಾಗಿ ಅಪ್ಪಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದರಿಂದ ಗಾಬರಿಗೊಂಡ ಗೃಹಿಣಿ ಭಯದಿಂದ ಚೀರಾಡಿ, ಓಡಿ ಬಂದು ತಕ್ಷಣ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.
ಮನೆಗೆ ಬಂದ ಪತಿ ಗೃಹಿಣಿಯನ್ನು ಸಮಾಧಾನಪಡಿಸಿ, ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಎನ್.ಆರ್. ಠಾಣೆ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ಆತನ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
