ಮೈಸೂರು: ಮೈಸೂರು ತಾಲೂಕು ಗುಡು ಮಾದನಹಳ್ಳಿ ಗ್ರಾಮದಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆ ನಿರ್ಮಿಸುವುದು ಸರಿ.ಆದರೆ ಹಸಿರು ವಲಯದಲ್ಲಿ ಆಸ್ಪತ್ರೆ ನಿರ್ಮಾಣ ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮೈಸೂರಿಗೆ ಆಗಮಿಸಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಗ್ರಾಮದ ಜನ ಸಮಸ್ಯೆ ತೋಡಿಕೊಂಡರು.
ಗುಡುಮಾದನಹಳ್ಳಿ ಗ್ರಾಮದಲ್ಲಿ ನೀರು ಇರುವ ಹಸಿರು ವಲಯ ಜಾಗದಲ್ಲಿ ನೂರಾರು ವರ್ಷಗಳಿಂದ ರೈತರು ತಮ್ಮ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಕಟ್ಟಡ ಕಟ್ಟಲು ಯೋಗ್ಯವಲ್ಲದ ಜಾಗದಲ್ಲೇ ಕಟ್ಟಡವನ್ನು ನಿರ್ಮಿಸಬೇಕು ಎಂದು ಆಡಳಿತ ವರ್ಗದವರು ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಕ್ಕ ಪಕ್ಕದಲ್ಲಿ ಬಂಜೂರು ಭೂಮಿ ಇದೆ ಹಾಗೂ ಬಿಳು ಬಿದ್ದ ಜಾಗ ಇದ್ದರೂ ಕೂಡಾ ಬೆಳೆ ಬೆಳೆಯುವ ಭೂಮಿ ಬೇಕು ಎಂದು ಆಡಳಿತ ನಡೆಸುತ್ತಿರುವವರು ಮುಂದಾಗಿದ್ದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ನೂರಾರು ರೈತರು ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು ರೈತರಿಗೆ ಧೈರ್ಯ ತುಂಬಿ ಇದರ ಬಗ್ಗೆ ಚರ್ಚೆ ಮಾಡುತ್ತೇನೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
