ಮೈಸೂರು: ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದರು.
ಸಾರ್ವಜನಿಕರು ತಮ್ಮ ಕಷ್ಟವನ್ನು ಪರಿಹಾರ ಮಾಡಿಕೊಳ್ಳಲು ದೇವಸ್ಥಾನಕ್ಕೆ ಹೋಗುವ ರೀತಿ ಪೊಲೀಸ್ ಠಾಣೆಗೂ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬರುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಮೈಸೂರು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಕಟ್ಟಡ ಲೋಕಾರ್ಪಣೆ ಮಾಡಿ ಗೃಹಸಚಿವರು ಮಾತನಾಡಿದರು.
ಮೈಸೂರು ಪಾರಂಪರಿಕ ಹಾಗೂ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಗಟ್ಟಿಗೊಳಿಸಿ ಪ್ರವಾಸಿಗರು ಇನ್ನೂ ಹೆಚ್ಚು ಬೇಟಿ ನೀಡುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಂದು ಪೊಲೀಸ್ ಠಾಣೆಯು ಸಹ ದೇವಸ್ಥಾನ ಎಂದು ನಾವು ತಿಳಿದುಕೊಳ್ಳಬೇಕು ಹಾಗೂ ಜನ ಸ್ನೇಹಿ ಪೊಲೀಸ್ ಆಗಿ ಕಾರ್ಯವನ್ನು ಪೊಲೀಸ್ ಅಧಿಕಾರಿಗಳು ನಿರ್ವಹಿಸಬೇಕು ಎಂದು ತಿಳಿಸಿದರು.
ದೇಶದಲ್ಲಿ ಮನೆ ಮನೆ ಪೊಲೀಸ್ ಭೇಟಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ರಾಜ್ಯವು 3 ನೇ ಸ್ಥಾನ ಪಡೆದುಕೊಂಡಿದೆ, ಇoಡಿಯನ್ ಜಸ್ಟಿಸ್ ರಿಪೋರ್ಟ್ ಪ್ರಕಾರ ದೇಶದ 120 ನಗರಗಳಲ್ಲಿ ಸೇಫ್ ಸಿಟಿಯಾಗಿ ಬೆಂಗಳೂರು 1 ನೇ ಸ್ಥಾನವನ್ನು ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
5 ಲಕ್ಷ ಜನಸಂಖ್ಯೆ ಇರುವ ಉದಯಗಿರಿ ಪೊಲೀಸ್ ಠಾಣೆಯನ್ನು 2 ವಿಭಾಗ ಮಾಡಿ ಹೊಸ ಪೊಲೀಸ್ ಠಾಣೆ ಯನ್ನು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ, ಮೈಸೂರು ನಗರದೆಲ್ಲೆಡೆ 380 ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್. ಶ್ರೀವತ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೈಸೂರಿನ ಪೊಲೀಸ್ ಮತ್ತು ಬ್ಯಾಂಡ್ ಗೆ ತನ್ನದೆ ಆದ ಗೌರವ ಮತ್ತು ಘನತೆ ಇದೆ. ಮೈಸೂರು ನಗರಕ್ಕೆ ಹಲವಾರು ದಕ್ಷ ಪೊಲೀಸರು ಅಧಿಕಾರಿಗಳು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮಿ ಪುರಂ ಠಾಣೆ ವ್ಯಾಪ್ತಿಯ ವಿಸ್ತೀರ್ಣ ಬಹಳ ದೊಡ್ಡದಿರುವುದರಿಂದ ಕುವೆಂಪು ನಗರ ಭಾಗಕ್ಕೆ ಒಂದು ಸಂಚಾರಿ ಪೊಲೀಸ್ ಠಾಣೆಯನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಇಂದು ಮೈಸೂರಿಗೆ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರವಾಸಿಗರು ಬರುವುದರಿಂದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಹೇಳಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಮೈಸೂರಿನ ಸುತ್ತಮುತ್ತ ಪರಿಸರ ವ್ಯವಸ್ಥೆಯಿಂದ ಮತ್ತು ಅರಣ್ಯದಿಂದ ಆಕರ್ಷಣೆಯವಾಗಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇನ್ನು ಬಹಳಷ್ಟು ಅಭಿವೃದ್ಧಿ ಹೊಂದಬೇಕಾಗಿದೆ, ವ್ಯಸನ ಮುಕ್ತದ ಜೊತೆಗೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್. ಡಿ. ಕೋಟೆ ಕ್ಷೇತ್ರದ ವಿಧಾನ ಸಭೆ ಶಾಸಕರಾದ ಅನಿಲ್ ಕುಮಾರ್ ಸಿ. ಅವರು ಮಾತನಾಡಿ ಎಚ್. ಡಿ ಕೋಟೆ ತಾಲೂಕಿಗೂ ಹೆಚ್ಚಿನ ಪೊಲೀಸ್ ಠಾಣೆಗಳನ್ನು ನಿರ್ಮಿಸಿಕೊಡಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ. ಎನ್. ಮಂಜೇಗೌಡ, ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾದ ಹೆಚ್. ಡಿ. ಗಣೇಶ್, ದಕ್ಷಿಣವಲಯ ಮಹಾನಿರೀಕ್ಷರಾದ ಡಾ. ಬೋರಲಿಂಗಯ್ಯ ಎಂ.ಬಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಮೈಸೂರು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕೇಂದ್ರ ಸ್ಥಾನ ಸಂಚಾರ ಮತ್ತು ಅಪರಾಧ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆಗೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆಗೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ತಡೆಗೆ ಮತ್ತು ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯಕ್ರಮದ ವೇಳೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗೆ ಶಾಸಕ ಶ್ರೀವತ್ಸ ಆಗ್ರಹಿಸಿದರು.
ಟೂರಿಸ್ಟ್ ಫ್ರೆಂಡ್ಲಿ, ಪೀಪಲ್ ಫ್ರೆಂಡ್ಲಿ ಎನ್ನುವಂತಹ ವಾತಾವರಣ ನಿರ್ಮಿಸಬೇಕು. ಶುಕ್ರವಾರ, ಶನಿವಾರ, ಭಾನುವಾರ ಮೈಸೂರಿನ ಹೃದಯ ಭಾಗದಲ್ಲಿ ವಿಪರೀತ ಟ್ರಾಫಿಕ್ ಜಾಮ್ ಆಗುತ್ತಿದೆ,ಇದರಿಂದ ದೂರದ ಊರುಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಟ್ರಾಫಿಕ್ ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ ಎಂದು ಗಮನ ಸೆಳೆದರು.
ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ,ಇತ್ತೀಚಿಗೆ ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಈ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಅದರಲ್ಲೂ ಇಂಜಿನಿಯರಿಂಗ್, ಮೆಡಿಕಲ್, ಬಿಎ., ಬಿಕಾಂ., ಕಾಲೇಜುಗಳ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು. ಮೈಸೂರಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಎಂಎಲ್ ಸಿ. ಸಿ ಎನ್ ಮಂಜೇಗೌಡ ಮಾತನಾಡಿ, ಪೊಲೀಸರ ವಸತಿ ಗೃಹಗಳ ನವೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸರು ಹಗಲಿರುಳೆನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
