ಮೈಸೂರು: ಹಣ್ಣುಗಳು ನಮ್ಮ ದೈನಂದಿನ ಆಹಾರದ ಅತ್ಯವಶ್ಯಕ ಭಾಗವಾಗಿರಬೇಕು. ಇವು ವಿಟಮಿನ್, ಖನಿಜ ಮತ್ತು ಫೈಬರ್ಗಳ ನೈಸರ್ಗಿಕ ಮೂಲಗಳಾಗಿವೆ ಎಂದು ಎನ್ ಆರ್ ಐ.ರವಿ ಮಹದೇವ್ ತಿಳಿಸಿದರು.
ನಗರದ ಎಂ ಜಿ ರಸ್ತೆಯಲ್ಲಿರುವ ಸಿ.ಎಸ್.ಐ. ಗರ್ಲ್ಸ್ ಬೋರ್ಡಿಂಗ್ ಹೋಮ್ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಪೌಷ್ಟಿಕಾಂಶದ ಬಗ್ಗೆ ಅರಿವು ಹಾಗೂ ಸೇವಾ ಕಾರ್ಯಕ್ರಮದ ಭಾಗವಾಗಿ ಡ್ರೈ ಫ್ರೂಟ್ಸ್,ಹಣ್ಣು ಹಂಪಲು ವಿತರಿಸಿ ರವಿ ಹಣ್ಣಿನ ಮಹತ್ವ,ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸಿದರು.
ಮಕ್ಕಳ ಆರೋಗ್ಯಕ್ಕೆ ಸಮತೋಲಿತ ಪೋಷಣೆಯ ಅಗತ್ಯತೆ ಇದೆ, ಅಪೌಷ್ಟಿಕತೆ ಇದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಅಪೌಷ್ಟಿಕತೆಯಿಂದಾಗಿ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ,ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ,ಕಲಿಕೆಯ ಸಾಮರ್ಥ್ಯ ಮತ್ತು ಏಕಾಗ್ರತೆಯಲ್ಲಿ ಕುಸಿತವಾಗುತ್ತದೆ,
ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿದಿನ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ಅಪೌಷ್ಟಿಕತೆಯ ಸಮಸ್ಯೆ ತಡೆಗಟ್ಟಬಹುದು.
ಪೋಷಕರು ಮತ್ತು ಶಿಕ್ಷಕರು ಈ ವಿಷಯದಲ್ಲಿ ಜಾಗೃತರಾಗಿ, ಮಕ್ಕಳಿಗೆ ಸರಿಯಾದ ಪೋಷಣೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಎಂದು ರವಿ ಮಹದೇವ್ ಸಲಹೆ ನೀಡಿದರು.
ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗವು ನಿರಂತರವಾಗಿ ಹಣ್ಣುಗಳ ವಿತರಣೆ, ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ
ಈ ನಿಸ್ವಾರ್ಥ ಸೇವೆ ಅಪೂರ್ವ ಮತ್ತು ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪೌಷ್ಟಿಕಾಂಶದ ಜಾಗೃತಿ ಮೂಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇಂತಹ ಸಾಮಾಜಿಕ ಸೇವಾ ಕಾರ್ಯಗಳು ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಬೆಳೆಸುವ ನಿಜವಾದ ಮಾರ್ಗವಾಗಿದೆ ಇನ್ನಷ್ಟು ಜನರು ಈ ರೀತಿಯ ಉಪಕ್ರಮಗಳಲ್ಲಿ ಮುಂದೆ ಬರಬೇಕು ಮತ್ತು ಸಮಾಜದಲ್ಲಿ ಅಪೌಷ್ಟಿಕತೆಯ ವಿರುದ್ಧ ಹೋರಾಟದಲ್ಲಿ ಪಾಲುದಾರರಾಗಬೇಕೆಂದು ಕರೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಮಾತನಾಡಿ,ಪ್ರತಿಯೊಬ್ಬ ವಿದ್ಯಾರ್ಥಿಯು ಓದಿನ ಸಮಯದಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ತಂದೆ ತಾಯಿಗೆ ಕೀರ್ತಿ ತರಬೇಕು. ಹಾಗೆಯೇ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವರಿಸಿ ನೈಸರ್ಗಿಕವಾಗಿ ಸಿಗುವ ಹಣ್ಣುಹಂಪಲನ್ನು ಶುದ್ಧ ಆಹಾರವನ್ನು ಸೇವಿಸಬೇಕೆಂದು ತಿಳಿಸಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಹಿರಿಯ ಕ್ರೀಡಾಪಟು ಮಹಾದೇವ್,ರಾಜೇಶ್ ಕುಮಾರ್, ಮಹೇಶ್, ನಿಲಯ ಪಾಲಕಿ ಗೀತಾ,ದತ್ತ ಮತ್ತಿತರರು ಹಾಜರಿದ್ದರು.
