ಮೈಸೂರು: ಮೈಸೂರಿನಲ್ಲಿ 38ನೇ ಅಖಿಲ ಭಾರತ ಅಂಚೆ ಸಾಂಸ್ಕೃತಿಕ ಸಮಾರಂಭ-2026 ವನ್ನು ಆಯೋಜಿಸಿದೆ ಎಂದು ಅಂಚೆ ಇಲಾಖೆ, ಮೈಸೂರು ವೃತ್ತದ ಸ್ಥಾನಿಕ ನಿರ್ದೇಶಕ ಸಂದೇಶ್ ಮಹಾದೇವಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಅಂಚೆ ವೃತ್ತವು ಫೆಬ್ರವರಿ 16 ರಿಂದ 20 ರ ವರೆಗೆ ಮೈಸೂರಿನ ಅಂಚೆ ತರಬೇತಿ ಕೇಂದ್ರ, ಮೈಸೂರು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆವರಣದಲ್ಲಿ 38ನೇ ಎಐಪಿಸಿಎಂ-2026 ಆಯೋಜಿಸಲಾಗಿದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭವು ಫೆ.16 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು,
ಅಂತಾರಾಷ್ಟ್ರೀಯ ಖ್ಯಾತಿಯ ವಾದಕರು ಮೈಸೂರು ಸಹೋದರರಾದ ವಿದ್ವಾನ್ ಮೈಸೂರು ಎಂ. ನಾಗರಾಜ್ ಹಾಗೂ ವಿದ್ವಾನ್ ಡಾ. ಮೈಸೂರು ಎಂ. ಮಂಜುನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮವು ದೇಶದಾದ್ಯಂತ ಅಂಚೆ ನೌಕರರ ನಡುವೆ ಸಾಂಸ್ಕೃತಿಕ ಸ್ಪರ್ಧೆ, ಸ್ನೇಹಭಾವ, ಏಕತೆ ಹಾಗೂ ಒಗ್ಗಟ್ಟಿನ ಮನೋಭಾವನೆ ಬೆಳೆಸುವ ಗುರಿಯನ್ನು ಹೊಂದಿದೆ. ಈ ಸಾಂಸ್ಕೃತಿಕ ಸಮಾರಂಭದಲ್ಲಿ ವಿವಿಧ ರೀತಿಯ ಪ್ರದರ್ಶನಗಳ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗುತ್ತಿದ್ದು, ಅಂಚೆ ಇಲಾಖೆಯೊಳಗಿನ ಸೃಜನಶೀಲತೆ, ಪರಂಪರೆ ಮತ್ತು ಒಗ್ಗಟ್ಟಿನ ಮನೋಭಾವವನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.
ದೇಶದ ವಿವಿಧ ಭಾಗಗಳಿಂದ 21 ಅಂಚೆ ವೃತ್ತಗಳನ್ನು ಪ್ರತಿನಿಧಿಸುವ ಒಟ್ಟು 335 ಸಿಬ್ಬಂದಿಗಳು ಮತ್ತು ಅವರ ಮಕ್ಕಳು ಈ ಐದು ದಿನಗಳ ಸಾಂಸ್ಕೃತಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು 21 ರಾಜ್ಯಗಳಿಂದ 32 ಕ್ಯಾಟಗರಿ ಗಾಯನ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಕೂಚಿಪಲಕುಡಿ, ಸೋಲೊ ಗಾನ, ಕಿರುನಾಟಕ ಕಾರ್ಯಕ್ರಮಗಳು ಜರುಗಲಿದೆ ಎಂದು ವಿವರಿಸಿದರು.
ಮಹಾ ನಿರ್ದೇಶಕ ಜಿತೇಂದ್ರ ಗುಪ್ತ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಮೊದಲ ಎರಡು ಕಾರ್ಯಕ್ರಮ ನಳ-1, ನಳ-1 ರಲ್ಲಿ ಇರುತ್ತದೆ. ನಂತರದ ಕಾರ್ಯಕ್ರಮ ಪಿಟಿಸಿ ಸಭಾಂಗಣದಲ್ಲಿ ನಡೆಯಲಿದೆ. ಪಂಡಿತ ವೆಂಕಟೇಶ್ ಕುಮಾರ್ ಅವರು ಪಾಲ್ಗೊಂಡು ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸುವರು ಎಂದು ಸಂದೇಶ್ ಮಹಾದೇವಪ್ಪ ತಿಳಿಸಿದರು.
