ಅಮೆರಿಕ: ಕರ್ನಾಟಕ ಮೂಲದ ಸಾಕೇತ್ ಶ್ರೀನಿವಾಸಯ್ಯ ಎಂಬ ವಿದ್ಯಾರ್ಥಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದು ಕುಟುಂಬ ಆತಂಕಕ್ಕೆ ಒಳಗಾಗಿದೆ.
ವಿದ್ಯಾರ್ಥಿ ಸಾಕೇತ್ ಪತ್ತೆಗೆ ಸ್ಥಳೀಯ ಪೊಲೀಸರ ಜತೆಗೂಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಭಾರತೀಯ ದೂತಾವಾಸ ಕಚೇರಿ ತಿಳಿಸಿದೆ.
ಸಾಕೇತ್ ಶ್ರೀನಿವಾಸಯ್ಯ ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೇ ಯಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಫೆಬ್ರವರಿ 10ರಂದು ಕ್ಯಾಲಿಫೋರ್ನಿಯಾದ ಬರ್ಕ್ಲೇ ನಗರದ ಡ್ವೈಟ್ ವೇ ಪ್ರದೇಶದಲ್ಲಿ ಕೊನೆಯಾಗಿ ಕಾಣಿಸಿಕೊಂಡಿದ್ದರು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಸಾಕೇತ್ ಕಾಣೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಆತಂಕ ವ್ಯಕ್ತಪಡಿಸಿದೆ. ಸಾಕೇತ್ನ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ಸಾಕೇತ್ ಅಪಾಯದ ಸ್ಥಿತಿಯಲ್ಲಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.ಸಾಕೇತ್ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ ತಕ್ಷಣ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿರುವುದು ಭಾರತೀಯ ಸಮುದಾಯದ ಜನರಲ್ಲೂ ಆತಂಕ ಮೂಡಿಸಿದೆ.ಅವರನ್ನು ಶೀಘ್ರ ಪತ್ತೆಹಚ್ಚುವಂತೆ ಮನವಿ ಮಾಡಲಾಗಿದೆ.
