ಮಂಡ್ಯ: ಮಳವಳ್ಳಿ ಟಿಎಪಿಸಿಎಂಎಸ್ ಹಿಂದಿನ ಆಡಳಿತ ಮಂಡಳಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಹಾಲಿ ನಿರ್ದೇಶಕ ಚಂದಳ್ಳಿ ಶ್ರೀಧರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ನಿರ್ದೇಶಕರಾಗಿದ್ದವರು ಈ ಬಾರಿ ಅಧ್ಯಕ್ಷರಾಗಿದ್ದಾರೆ. ಕಳೆದ ಆಡಳಿತದಲ್ಲಿ ಅವ್ಯವಹಾರ ನಡೆದಿದೆ,ಹಾಲಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು, ಈಗಲೂ ನಿರ್ದೇಶಕರಾಗಿದ್ದಾರೆ, ಈ ಅವ್ಯವಹಾರದಲ್ಲಿ ಪಾಲುದಾರರೇ ಎಂಬ ಅನುಮಾನ ಮೂಡಿದೆ,ಅವರ ಮೌನವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ ಎಂದು ಹೇಳಿದರು.
ಸಂಘದ ತಳಗವಾದಿ ಉಪಶಾಖೆಯಲ್ಲಿ 96 ಲಕ್ಷ ರೂ.ಬೆಲೆಯ ರಸಗೊಬ್ಬರ ದಾಸ್ತಾನು ಇತ್ತು. ಪರಿಶೀಲನೆ ವೇಳೆ 25 ಲಕ್ಷ ರೂ.ಗಳಷ್ಟು ಮಾತ್ರ ದಾಸ್ತಾನು ಉಳಿದಿದೆ. ಸಂಘದ ಸಿಇಒ 64.14 ಲಕ್ಷ ರೂ. ಅವ್ಯವಹಾರ ನಡೆದಿದೆ ಎಂದು ವರದಿ ನೀಡಿದರೆ, ಲೆಕ್ಕ ಪರಿಶೋಧಕರು 69.14 ಲಕ್ಷ ರೂ. ಅವ್ಯವಹಾರವಾಗಿದೆ ಎಂದೂ, ಸಂಘದ ಮುಖಂಡರು 62 ಲಕ್ಷ ರೂ. ಅವ್ಯವಹಾರವಾಗಿದೆ ಎಂದು ಬರೆದುಕೊಂಡಿದ್ದಾರೆ ಎಂದು ಹೇಳಿದರು.
ಸಹಕಾರಿ ನಿಯಮಗಳನ್ನು ಗಾಳಿಗೆ ತೂರಿ ಸಂಘದ ಸದಸ್ಯರಲ್ಲದ 18 ಮಂದಿಗೆ ಸಾಲ ನೀಡಲಾಗಿದೆ. ವಿನಾ ಕಾರಣ ಸಣ್ಣ-ಸಣ್ಣ ಕಾಮಗಾರಿ ಮಾಡಿ ಹಣ ದುರುಪಯೋಗ ಮಾಡಲಾಗಿದೆ. ಅನುಮತಿ ಇಲ್ಲದೇ ಮೀಸಲು ನಿಧಿಯ 76 ಲಕ್ಷ ರೂ. ಹಾಗೂ ನೌಕರರ ಗ್ರಾಚ್ಯುಟಿ 15 ಲಕ್ಷ ರೂ. ದುರ್ಬಳಕೆ, ದುಡಿಯುವ ಬಂಡವಾಳದಲ್ಲಿ 4.5 ಕೋಟಿ ರೂ. ದುರುಪಯೋಗವಾಗಿದೆ. ಅಧ್ಯಕ್ಷರು ಹಾಗೂ ಲೆಕ್ಕ ಪರಿಶೋಧಕರು ಒಂದೇ ಗ್ರಾಮದವರಾಗಿದ್ದು, ಆಡಿಟ್ ರಿಪೋರ್ಟ್ ಪಾರದರ್ಶಕವಾಗಿ ನಡೆದಿಲ್ಲ ಎಂದು ಆರೋಪಿಸಿದರು.
3 ದಿನದೊಳಗೆ ಸಭೆ ಕರೆದು ತನಿಖೆಗೆ ಆದೇಶಿಸದಿದ್ದಲ್ಲಿ ಸಹಕಾರ ಇಲಾಖೆಗೆ ಹಾಗೂ ಸಚಿವರಿಗೆ ಪತ್ರ ಬರೆಯಲಾಗುವುದು. ಜತೆಗೆ ಸಂಘದ ಷೇರುದಾರರೊಂದಿಗೆ ಮಳವಳ್ಳಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಚಂದಳ್ಳಿ ಶ್ರೀಧರ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಶಿವರುದ್ರಪ್ಪ, ರಾಮಣ್ಣ, ಶೋಭ, ರತ್ನಮ್ಮ ಉಪಸ್ಥಿತರಿದ್ದರು.
