ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಡುವ ಗ್ರಾಮ ಸಹಾಯಕ ಹುದ್ದೆಗೆ ವ್ಯಕ್ತಿಯೊಬ್ಬ ನಕಲಿ ವಂಶವೃಕ್ಷ ಬಳಸಿಕೊಂಡು ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದು ಅರ್ಹ ಪಲಾನುಭವಿಗೆ ಅನ್ಯಾಯವಾದ ಘಟನೆ ವರದಿಯಾಗಿದೆ.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ನಿವಾಸಿ ಚಂದ್ರ ಎಂಬುವರು ಹುದ್ದೆ ವಂಚಿತ ವ್ಯಕ್ತಿ.
ಚಂದ್ರ ಅವರ ತಂದೆ ನಾರಾಯಣನಾಯಕ ಎಂಬುವರು ಗ್ರಾಮ ಸಹಾಯಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೇವಾ ಅವಧಿಯಲ್ಲೇ ಇವರು ಅಕಾಲಿಕವಾಗಿ 2010 ರಲ್ಲಿ ಮೃತಪಟ್ಟಿದ್ದಾರೆ.
ಇವರ ಸಂಬಂಧಿ ಪಿ. ಸಿದ್ದರಾಜು ಅವರನ್ನು ಈ ಹುದ್ದೆಗೆ ನೇಮಿಸಿಕೊಳ್ಳಲಾಗಿದೆ. ಈ ಸಂಬಧ ಚಂದ್ರ ಅವರು ಪ್ರಶ್ನಿಸಿ ನಂತರ, ಈ ಬಗ್ಗೆ ಉಪವಿಭಾಗಾಧಿಕಾರಿಗಳ ಕೋರ್ಟ್ನಲ್ಲಿ ದಾವೆ ಹಾಕಿದ್ದಾರೆ.
ಕೋರ್ಟಿನ ತೀರ್ಪಿನಲ್ಲಿ ಪಿ. ಸಿದ್ದರಾಜು ನೀಡಿರುವ ವಂಶವೃಕ್ಷ ಹಾಗೂ ದಾಖಲೆಗಳು ಸಂಶಯಾಸ್ಪದವಾಗಿದೆ. ಗ್ರಾಮ ಸಹಾಯಕ ಹುದ್ದೆ ನೇಮಕಾತಿ ಅವಧಿಯಲ್ಲಿ ಹಾಜರುಪಡಿಸಿರುವ ವಂಶವೃಕ್ಷವು ಅಟಲ್ಜಿ ಜನಸ್ನೇಹಿ ಕೇಂದ್ರ ಅಥವಾ ಸಕ್ಷಮ ಪ್ರಾಧಿಕಾರದಿಂದ ಅಧಿಕೃತವಾಗಿ ಪಡೆದ ವಂಶವೃಕ್ಷವಾಗಿರುವುದಿಲ್ಲ, ಮತ್ತೆ ನಿಯಮಾನುಸಾರ ಪ್ರಕಟಣೆ ಹೊರಡಿಸಿ ಗ್ರಾಮ ಸಹಾಯಕ ಹುದ್ದೆ ನೇಮಕಾತಿಗೆ ಕ್ರಮವಹಿಸಲು ತಹಶೀಲ್ದಾರ್ರವರಿಗೆ ಕೋರ್ಟ್ ನಿರ್ದೇಶನ ನೀಡಿತ್ತು.
ಇದಾದ ಬಳಿಕ ಪಿ. ಸಿದ್ದರಾಜು ಅವರನ್ನು ಹುದ್ದೆಯಿಂದ ರದ್ದು ಮಾಡಲಾಗಿತ್ತು. ನಂತರ ಮತ್ತೆ ಅರ್ಜಿಯನ್ನು ಕರೆಯಲಾಗಿತ್ತು. ಆದರೆ 15 ದಿನಗಳ ಬಳಿಕ ಪಿ. ಸಿದ್ದರಾಜುರನ್ನೇ ಮತ್ತೆ ಈ ಹುದ್ದೆಗೆ ನೇಮಕ ಮಾಡಲಾಗಿದೆ. ಈ ಸಂಬಂಧ ಕಳೆದ ಬುಧವಾರ ತಹಶೀಲ್ದಾರ್ಗೆ ಹುದ್ದೆ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದೇನೆ ಎಂದು ಚಂದ್ರ ತಿಳಿಸಿದ್ದಾರೆ.
ನಮ್ಮ ಕುಟುಂಬ ಬಡತನದಿಂದ ಕೂಡಿದೆ. ನಾವು ಬಿಳಿಗಿರಿರಂಗನಬೆಟ್ಟದ ದೇಗುಲದ ಬಳಿ ಧೂಪ ಮಾರಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನನಗೆ ಮಡದಿ, ಇಬ್ಬರು ಮಕ್ಕಳಿದ್ದು ನಮ್ಮ ಕುಟುಂಬದ ಆರ್ಥಿಕ ನಿರ್ವಹಣೆ ಕಷ್ಟವಾಗಿದೆ. ನನಗೆ ಈ ಹುದ್ದೆ ಸಿಗದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಚಂದ್ರ ಹಾಗೂ ಇವರ ಪತ್ನಿ ಮಹದೇವಮ್ಮ ತಮ್ಮ ಅಳಲನ್ನು ತೋಡಿಕೊಂದಿದ್ದರೆ.
ತಹಸೀಲ್ದಾರ್ ಅವರು ತಕ್ಷಣ ಈ ಬಗ್ಗೆ ಗಮನ ಹರಿಸಿ,ಅರ್ಹರಿಗೆ ನ್ಯಾಯ ಒದಗಿಸಬೇಕಿದೆ.
