ಚಾಮರಾಜನಗರ: ಸರಣಿ ಮನೆಗಳ್ಳನತ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಲೆ ಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
9-08-2025 ರಂದು ಮ.ಮ.ಬೆಟ್ಟ ಪೊಲೀಸ್ ಠಾಣೆಗೆ ಸುಂದರಮ್ಮ ಎಂಬವರು ಹಾಜರಾಗಿ ಪೊನ್ನಾಚಿ ಬಳಿಯ ಮರೂರು ಗ್ರಾಮದ ತಮ್ಮ ತಾಯಿ ಮನೆಯಲ್ಲಿ ಯಾರೋ ಕಳ್ಳರು ಮನೆಯಲ್ಲಿಟ್ಟಿದ್ದ ಹಣ 1,40,000 ಮತ್ತು 2 ಗ್ರಾಂ ಚಿನ್ನದ ಆಭರಣವನ್ನು ಕಳ್ಳತನ ಮಾಡಿದ್ದಾರೆಂದು ದೂರು ನೀಡಿದ್ದರು.
ಅದೇ ರೀತಿ 29-08-2026 ರಂದು ಮರೂರು ಗ್ರಾಮದ ಶಿವಣ್ಣ ಎಂಬವರು 1,45,000 ನಗದು ಮತ್ತು 1 ವಾಚ್ ಕಳ್ಳತನವಾಗಿದೆ ಎಂದು ಮ.ಮ. ಬೆಟ್ಟ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣಗಳ ಬಗ್ಗೆ ದೂರು ದಾಖಲಿಸಿ, ಆರೋಪಿಗಳ ಪತ್ತೆ ಬಗ್ಗೆ ಚಾಮರಾಜನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಮುತ್ತುರಾಜು.ಎಂ.ಅವರ ನಿರ್ದೇಶನದ ಮೇರೆಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶಶಿಧರ್, ಎಂ.ಎನ್., ಹಾಗೂ ಡಿವೈಎಸ್ಪಿ ಕೊಳ್ಳೆಗಾಲ ಉಒ ವಿಭಾಗದ ಡಿವೈಎಸ್ಪಿ ಮೋಹನ್., ಜೆ., ಮಾರ್ಗದರ್ಶನದಲ್ಲಿ, ಹನೂರು ಠಾಣೆಯ ಪೊಲೀಸ್ ನಿರೀಕ್ಷಕರಾದ ಆನಂದಮೂರ್ತಿ (ಪ್ರಭಾರ) ಮತ್ತು ಮ.ಮ. ಬೆಟ್ಟ ಠಾಣೆಯ ಪಿಎಸ್ಐ ಜಯರಾಂ., ಸಿ.ಎನ್. ಹಾಗೂ ಸಿಬ್ಬಂದಿಗಳಾದ ನಾಗರಾಜು, ರವಿಕುಮಾರ್, ರಮೇಶ್ ಕುಮಾರ್ ನೇತೃತ್ವದಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಕಾರಯ್ಯನಗುಂಡಿ ಹಳ್ಳ, ಗ್ರಾಮದ ಆರೋಪಿಗಳಾದ ರಂಗಸ್ವಾಮಿ @ ತಮ್ಮಯ್ಯ (33), ಶಿವರಾಮು(29) ಬಂಧಿಸಿ ವಿಚಾರಣೆ ಮಾಡಿದಾಗ ಆರೋಪಿಗಳು ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಇಬ್ಬರು ಆರೋಪಿಗಳಿಂದ ಒಟ್ಟು 1,40,000 ರೂಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.
ರಂಗಮಾದಪ್ಪ (30) ಎಂಬಾತ ತಲೆಮರಿಸಿಕೊಂಡಿದ್ದು,ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
