ಬೆಂಗಳೂರು, ಸೆ.2: ಕೆಆರ್ಐಡಿಎಲ್ನಲ್ಲಿ ಶೇ.7ರಷ್ಟು ಲಂಚ ಪಡೆಯುತ್ತಿರುವ ಇಬ್ಬರು ಸಚಿವರನ್ನು ಕೂಡಲೇ ವಜಾ ಮಾಡಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಾದರೂ ಲಂಚ ಪಡೆದರೆ ನನಗೆ ಕರೆ ಮಾಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಅಧಿಕೃತವಾಗಿ ಪತ್ರ ಬರೆದು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕೆಆರ್ಐಡಿಎಲ್ ನಲ್ಲಿ ಹೆಚ್ಚುವರಿಯಾಗಿ ಶೇ. 7ರಷ್ಟು ಲಂಚ ಪಡೆಯಲಾಗುತ್ತಿದೆ, ಈ ಬಗ್ಗೆ ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಇದನ್ನು ಅವರ ಪಕ್ಷದ ಶಾಸಕರೇ ಆರೋಪ ಮಾಡಿದ್ದಾರೆ.ಇದುಬಪ್ರಮುಖ ಸಾಕ್ಷ್ಯ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳು ಕೂಡ ರೌಡಿಗಳಾಗಿದ್ದಾರೆ. ಅಂದರೆ ಈ ಸರ್ಕಾರ ಕಮಿಶನ್ ಆಡಳಿತ ಮಾಡುತ್ತಿದೆ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
100 ರೂ. ಬಿಡುಗಡೆ ಆದರೆ 30 ರೂ. ಗಳಷ್ಟು ಮಾತ್ರ ಕೆಲಸ ಆಗುತ್ತದೆ. ಉಳಿದ ಶೇಕಡಾ 70ರಷ್ಟು ಕಮಿಶನ್ಗೆ ಹೋಗುತ್ತದೆ. ನಾವು ಆರೋಪ ಮಾಡಿದಾಗ ದಾಖಲೆ ಕೊಡಲು ಕೇಳಿದ್ದರು. ಈಗ ಕಾಂಗ್ರೆಸ್ ಪಕ್ಷದ ಶಾಸಕರೇ ಕಮಿಶನ್ ಬಗ್ಗೆ ಹೇಳಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗೂ ಇಲಾಖಾ ಸಚಿವರು ಪ್ರತಿ ತಿಂಗಳು ಕಮಿಶನ್ ಪಡೆಯುತ್ತಿದ್ದಾರೆ ಎಂದು ಅವರೇ ಹೇಳಿದ್ದಾರಲ್ಲ ಇದಕ್ಕೆ ಏನನ್ನುತ್ತೀರಾ ಸಿಎಂ ಎಂದು ಅಶೋಕ್ ಪ್ರಶ್ನಿಸಿದರು.
ಈಗಾಗಲೇ ಒಬ್ಬ ಸಚಿವ ಭ್ರಷ್ಟಾಚಾರದಿಂದಾಗಿ ರಾಜೀನಾಮೆ ನೀಡಿದ್ದಾರೆ. ಆದರೂ ಇಬ್ಬರು ಸಚಿವರಿಗೆ ಭಯವಿಲ್ಲ. ಈ ಶೇ 7ರಷ್ಟು ಲಂಚ ರಾಹುಲ್ ಗಾಂಧಿಗೂ ತಲುಪುತ್ತದೆ ಎಂದು ಟಾಂಗ್ ನೀಡಿದರು.
ಕರ್ನಾಟಕ ಎಂದರೆ ಇತರೆ ರಾಜ್ಯಗಳಿಗೆ ಮಾದರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಂದರೆ ಈ 7 ಪರ್ಸೆಂಟ್ ಕಮಿಶನ್ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.
ಇನ್ನು ಇಲಾಖಾ ತನಿಖೆ ಎಂದು ಆದೇಶ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಈ ಕಮಿಶನ್ನಿಂದಾಗಿ ಒಟ್ಟು ಸುಮಾರು 800 ಕೋಟಿಗಳಷ್ಟು ಸಂಗ್ರಹವಾಗಿರಬಹುದು. ಕರ್ನಾಟಕ ಎಟಿಎಂ ಎಂದು ನಾನು ಹಿಂದೆಯೇ ಹೇಳಿದ್ದೆ ಎಂದು ಹೇಳಿದರು.
ಬಿ.ಆರ್.ಪಾಟೀಲ್ ವಸತಿ ಇಲಾಖೆಯ ಕಮಿಶನ್ ಬಗ್ಗೆ ಮಾತಾಡಿದ್ದರು. ಬಸವರಾಜ ರಾಯರೆಡ್ಡಿ ಕೆಕೆಆರ್ ಡಿಬಿ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆದಿದ್ದರು. ಆರ್.ಬಿ.ತಿಮ್ಮಾಪುರ ಮಾಡಿದ್ದ ಅಕ್ರಮದ ಕುರಿತು ನಾನೇ ಆಡಿಯೋ ಮತ್ತು ದಾಖಲೆಗಳನ್ನು ನೀಡಿದ್ದೆ. ಸರ್ಕಾರಕ್ಕೆ ಮಾನವಿದ್ದರೆ ಆ ಇಬ್ಬರೂ ಸಚಿವರನ್ನು ವಜಾ ಮಾಡಬೇಕಿತ್ತು. ಕಾಂಗ್ರೆಸ್ ಶಾಸಕ ರೈ ಆರೋಪ ಮಾಡಿರುವ ಈ ಪ್ರಕರಣವನ್ನು ಲೋಕಾಯುಕ್ತ ಅಥವಾ ಸಿಬಿಐ ತನಿಖೆಗೆ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಒತ್ತಾಯಿಸಿದರು.
ಮಲ್ಲಿಕಾರ್ಜುನ ಖರ್ಗೆ ಮಾತ್ರವಲ್ಲ, ಯಾವುದೇ ದಲಿತರು ಎಲ್ಲಿಗೇ ಭೇಟಿ ನೀಡಿದರೂ ಅಲ್ಲಿ ಶುದ್ಧೀಕರಣ ಮಾಡುವುದು ತಪ್ಪು. ಇದು ಮಾನವೀಯತೆಯ ದೃಷ್ಟಿಯಿಂದ ಹಾಗೂ ಸಂವಿಧಾನದ ಪ್ರಕಾರ ದೊಡ್ಡ ಅಪರಾಧ ಎಂದು ಇದೇ ವೇಳೆ ಅಶೋಕ ಹೇಳಿದರು.
ಮೊದಲು ಕಾಂಗ್ರೆಸ್ನವರು ತಾವು ಯಾವ ಕಡೆ ಇದ್ದೀವಿ ಎಂದು ಹೇಳಲಿ. ಒಂದು ಕಡೆ ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. ಮತ್ತೊಂದು ಕಡೆ ಇಸ್ಲಾಂ ಮಾತ್ರ ಶ್ರೇಷ್ಠ ಎನ್ನುತ್ತಾರೆ. ನಾನು ನನ್ನ ಕುಟುಂಬದವರು ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ ಜೈಲು ಸೇರಿದ್ದೆವು. ನಾವು ಮೊದಲಿಂದಲೂ ಆರ್ಎಸ್ಎಸ್ನಿಂದಲೇ ಬೆಳೆದೆವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಕೂಡ ಪಾದ ಯಾತ್ರೆ ಮಾಡಿತ್ತು. ಅದರಿಂದ ಏನೂ ಲಾಭವಾಗಲಿಲ್ಲ. ಈಗ ನಾವು ಜನರಿಗಾಗಿ ಪಾದಯಾತ್ರೆ ಮಾಡಿದರೆ ಅದನ್ನು ಟೀಕೆ ಮಾಡುತ್ತಾರೆ. ಇದರಲ್ಲಿ ರಾಜಕೀಯ ಇಲ್ಲ. ಬರ ಪರಿಹಾರ ಮೊದಲಾದ ಸಮಸ್ಯೆಗಳಿಗಾಗಿ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಿಯಲ್ ಎಸ್ಟೇಟ್ ಮಾಫಿಯಾದ ತಾಳಕ್ಕೆ ತಕ್ಕಂತೆ ಕುಣಿಯುವ ಸಿಎಂ ಡಿ.ಕೆ.ಶಿವಕುಮಾರ್ ಉದ್ಯಾನಗಳ ಕಬಳಿಕೆಗೆ ಬಿಲ್ ಮೂಲಕ ಅವಕಾಶ ನೀಡಿದ್ದಾರೆ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಉದ್ಯಾನಗಳನ್ನು ರಕ್ಷಿಸಬೇಕು. ಈಗ 5 % ಎಂದು ಹೇಳಿ ಮುಂದೆ ಅದನ್ನು 50% ಗೆ ಹೆಚ್ಚಿಸಬಹುದು.ನಾಡಪ್ರಭು ಕೆಂಪೇಗೌಡರು ಕೆರೆಗಳನ್ನು ಕಟ್ಟಿ ಗಾರ್ಡನ್ ಸಿಟಿ ಮಾಡಿದ್ದರು. ಈಗ ಇವರು ಉದ್ಯಾನಗಳನ್ನು ನಾಶ ಮಾಡಿದರೆ ದೆಹಲಿಯಂತೆ ವಾಯು ಮಾಲಿನ್ಯ ನಗರವಾಗುತ್ತದೆ ಎಂದು ಎಚ್ಚರಿಸಿದರು.
ಸುರಂಗ ರಸ್ತೆ ಯೋಜನೆಯಲ್ಲಿ ಪಾರ್ಕಿಂಗ್ ಅಗತ್ಯವಿಲ್ಲ. ಮಾಲ್ ನಿರ್ಮಿಸಲು ಲಾಲ್ ಬಾಗ್ ಜಾಗವನ್ನು ಬಳಸಲು ನಿರ್ಧರಿಸಿದ್ದಾರೆ. ಯೋಜನೆ ಗುತ್ತಿಗೆ ಪಡೆದಿರುವ Dorkar ಅದಾನಿ ಅವರನ್ನು ಮನೆಗೆ ಕರೆಸಿ ತಿಂಡಿ ತಿನ್ನಿಸಿ ಕಳುಹಿಸಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅದೇ ಅದಾನಿಯನ್ನು ಟೀಕೆ ಮಾಡುತ್ತಾರೆ. ನಾವು ಇದೇ ಶನಿವಾರ ಹಾಗೂ ಭಾನುವಾರ ಎಲ್ಲ ಉದ್ಯಾನಗಳಲ್ಲಿ ಪ್ರತಿಭಟನೆ ಮಾಡುತ್ತೇವೆ, ಬೆಂಗಳೂರು ರಕ್ಷಿಸಿ ಎಂಬ ಅಭಿಯಾನ ಮಾಡುತ್ತೇವೆ,
ನಾಗರಿಕರಿಂದ ಸಹಿ ಪಡೆದು ಅದನ್ನು ರಾಜ್ಯಪಾಲರಿಗೆ ಸಲ್ಲಿಸುತ್ತೇವೆ ಎಂದು ಅಶೋಕ್ ತಿಳಿಸಿದರು.
