ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಯಾಗಿ ಜಿ.ಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಕುಮಾರ್ ಅವರು ಅಧಿಕಾರ ವಹಿಸಿಕೊಂಡರು.
ಕಳೆದ ಎರಡು ದಿನಗಳಿಂದ ಪ್ರಗತಿಪರ ಸಂಘಟನೆಗಳು ಹಿಂದಿನ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅಮಾತ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಮೋನಾ ರೋತ್ ಅವರು ಇಒ ಗುರುಶಾಂತಪ್ಪ ಬೆಳ್ಳುಂಡಗಿಗೆ ಮೇ.7 ರಿಂದ 26 ರವರೆಗೆ ಕಡ್ಡಾಯ ರಜೆ ನೀಡಿ ಕಳುಹಿ ಸಿದ್ದಾರೆ.
ಇವರ ಕಡ್ಡಾಯ ರಜೆಯಿಂದ ತೆರವಾಗಿರುವ ಹುದ್ದೆಗೆ ಕೊಳ್ಳೇಗಾಲ ಜಿ.ಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಕುಮಾರ್ ಅವರನ್ನು ನೇಮಿಸಿದ್ದಾರೆ.
ಏನಿದು ಪ್ರಕರಣ:
ಬಸವಣ್ಣನವರ ಜಯಂತಿಯ ಪೂರ್ವಭಾವಿ ಸಭೆಯ ವೇಳೆ ತಾ.ಪಂ.ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಹಾಗೂ ಗ್ರೂಪ್ ಡಿ ದರ್ಜೆ ಸಿಬ್ಬಂದಿಗಳಿಗೆ ತಾ.ಪಂ ಸಭಾಂಗಣದ ಶೌಚಗೃಹ ಶುಚಿಗೊಳಿಸುವಂತೆ ಹಿಂದಿನ ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ನಿರ್ದೇಶಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಕೆರಳಿದ ಪ್ರಗತಿಪರ ಸಂಘಟನೆಗಳು ಕಳೆದ ಎರಡು ದಿನಗಳಿಂದ
ಹಿಂದಿನ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅಮಾತ್ತಿಗೆ ಒತ್ತಾಯಿಸಿ ಅನಿರ್ಧಿಷ್ಟ ಪ್ರತಿಭಟನಾ ಧರಣಿ ನಡೆಸುತ್ತಿದ್ದರು.
ಈ ಆರೋಪದ ಹಿನ್ನೆಲೆ ಜಿ.ಪಂ ಸಿಇಒ ಮೋನಾ ರೋತ್, ಗುರುಶಾಂತಪ್ಪ ಅವರನ್ನು ಮೇ.7 ರಿಂದ 26 ರವರೆಗೆ ರಜೆ ಮೇಲೆ ಕಳುಹಿಸಿದ್ದಾರೆ. ಅಲ್ಲದೇ, ಇವರಿಂದ ತೆರವಾದ ಸ್ಥಳಕ್ಕೆ ಕೊಳ್ಳೇಗಾಲ ತಾ.ಪಂ ಕಚೇರಿ ಆವರಣದಲ್ಲಿರುವ ಜಿ.ಪಂ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಕುಮಾರ್ ಅವರನ್ನು ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ತಾ.ಪಂ ಇಒ ಹುದ್ದೆಯ ಹೆಚ್ಚುವರಿ ಪ್ರಭಾರವಹಿಸಿಕೊಳ್ಳಲು ಜಿ.ಪಂ ಸಿಇಒ ಬುಧವಾರ ಆದೇಶ ಹೊರಡಿಸಿದ್ದಾರೆ.
ಆದ್ದರಿಂದ ಬುಧವಾರ ಸಂಜೆ ತಾ.ಪಂ ಕಚೇರಿಗೆ ತೆರಳಿ ಪ್ರಭಾರ ಅಧಿಕಾರವಹಿಸಿಕೊಂಡ ಎಇಇ ಕುಮಾರ್ ಅವರನ್ನು ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ವಿವಿದ ಸಂಘ ಸಂಸ್ಥೆ ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

