ಮೈಸೂರು: ಅಮಾನತಿನಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆ ಹೆಡ್ ಕಾನ್ ಸ್ಟೇಬಲ್ ಧನಂಜಯ ಕಾಣೆಯಾಗಿದ್ದು ಕುಟುಂಬದಲ್ಲಿ ಆತಂಕ ಮನೆಮಾಡಿದೆ.
ಪತಿಯನ್ನು ಹುಡುಕಿಕೊಡುವಂತೆ ಪತ್ನಿ ರಾಜೇಶ್ವರಿ ಅವರು ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿ ಮನವಿ ಮಾಡಿದ್ದಾರೆ.
ಕಾಣೆಯಾಗಿರುವ ಹೆಡ್ ಕಾನಸ್ಟೇಬಲ್ ಧನಂಜಯ ದೇವರಾಜ ಪೊಲೀಸ್ ಠಾಣೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೆಲವು ದಿನಗಳ ಹಿಂದೆ ಕರ್ತವ್ಯದಲ್ಲಿದ್ದ ವೇಳೆ ದೇವರಾಜ ಠಾಣೆಯ ಉಮೇಶ್ ಹಾಗೂ ಧನಂಜಯ್ 112 ಗರುಡಾ ವಾಹನದಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದರು.
ಈ ವೇಳೆ ಉಮೇಶ್ ಅವರು ಧನಂಜಯ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು.ಈ ಘಟನೆ ಪೊಲೀಸ್ ಇಲಾಖೆಗೆ ಮುಜುಗರ ತಂದಿತ್ತು.ಈ ಕಾರಣಕ್ಕಾಗಿ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಇಬ್ಬರನ್ನೂ ಸಸ್ಪೆಂಡ್ ಮಾಡಿದ್ದರು.
ಇತ್ತೀಚೆಗೆ ಉಮೇಶ್ ಅವರ ಅಮಾನತು ಆದೇಶ ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು.ಆದರೆ ಧನಂಜಯ ಅವರ ಅಮಾನತು ಮುಂದುವರೆಸಲಾಗಿತ್ತು.
ಈ ವಿಚಾರದಲ್ಲಿ ಧನಂಜಯ್ ಮಾನಸಿಕವಾಗಿ ಖಿನ್ನವಾಗಿದ್ದರು.ಹಿರಿಯ ಅಧಿಕಾರಿಗಳ ಭೇಟಿ ಮಾಡಲು ಸಾಧ್ಯವಾಗದೆ ನೊಂದಿದ್ದರು.ಮೂರು ದಿನಗಳ ಹಿಂದೆ ಹೂಟಗಳ್ಳಿ ಹೌಸಿಂಗ್ ಬೋರ್ಡ್ ನಿವಾಸದಿಂದ ಹೊರಟವರು ಮನೆಗೆ ಹಿಂದಿರುಗಿಲ್ಲವೆಂದು ಪತ್ನಿ ರಾಜೇಶ್ವರಿ ನಾಪತ್ತೆ ದೂರು ದಾಖಲಿಸಿದ್ದಾರೆ.
