ಈಗ ಎಲ್ಲೆಲ್ಲೂ ಕರಾವಳಿಯದೇ ಸದ್ದು…
ಹೌದು. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಹಾಗೂ ಸಂಪದಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕರಾವಳಿ ಸದ್ದು ಮಾಡುತ್ತಿದೆ.
ಅದರಲ್ಲೂ ಈ ಚಿತ್ರದ ಮುದ್ದು ಗುಮ್ಮ… ಹಾಡು ಸಾಕಷ್ಟು ವೈರಲ್ ಆಗಿದೆ. ಕಾಂತಾರ ಸಿನಿಮಾ ಬಳಿಕ ಕರಾವಳಿ ಭಾಗದ ಕಥೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಭಾಗದ ಕಥೆಗಳು ಸಿನಿಮಾಗಳಾಗಿ ರೂಪುಗೊಳ್ಳುತ್ತಿವೆ.
ಕಾಂತಾರ, ಸು ಫ್ರಮ್ ಸೊ, ಕಾಂತಾರ ಚಾಪ್ಟರ್ 1 ಆಯ್ತು.ಇದೀಗ ಇನ್ನೊಂದು ಸಿನಿಮಾ ಈ ಭಾಗದ ಕತೆಯನ್ನೇ ಹೇಳುವುದಕ್ಕೆ ಬಂದಿದೆ. ಅದೇ ಕರಾವಳಿ.
ಗುರುದತ್ ಗಾಣಿಗ ಸಿನಿಮಾ ಮುಗಿಸಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಆದರೆ ಕರಾವಳಿ ಸಿನಿಮಾದ ಮುದ್ದು ಗುಮ್ಮ…ಮುದ್ದು ಗುಮ್ಮ ನೀನೇನಾ… ಹಾಡು ರಿಲೀಸ್ ಆಗಿದ್ದು ಸಿನಿರಸಿಕರು ಗುನುಗುತ್ತಿದ್ದಾರೆ.ಈ ಗೀತೆ ಜನರ ಹೃದಯ ಗೆದ್ದಿದೆ. ತೆಲುಗಿನ ಜನಪ್ರಿಯ ಗಾಯಕ ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದಾರೆ.
ಇಲ್ಲಿವರೆಗೂ ಟೀಸರ್, ಪೋಸ್ಟರ್ ನೋಡಿದ್ದ ಸಿನಿಪ್ರಿಯರನ್ನು ಸಿನಿಮಾದ ಮೊದಲ ಹಾಡು ರೊಮ್ಯಾಂಟಿಕ್ ಮೂಡಿಗೆ ಕರೆದುಕೊಂಡು ಹೋಗಿದೆ. ಈಗ ರಿಲೀಸ್ ಆಗಿರುವ ಈ ರೊಮ್ಯಾಂಟಿಂಕ್ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ಬಹಳ ಮುದ್ದಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
