ಪಾಕಿಸ್ತಾನ: ಪಾಕಿಸ್ತಾನದ
ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದ ವಿವಾಹದ ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದು ಏಳು ಮಂದಿ ಮೃತಪಟ್ಟ ಘಟನೆ ನಡೆದಿದೆ.
ದಾಳಿ ವೇಳೆ ಹತ್ತು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡಿದೆ.
ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯ ಕುರೇಶಿ ಮೋರ್ ಸಮೀಪವಿರುವ ಶಾಂತಿ ಸಮಿತಿ ನಾಯಕ ನೂರ್ ಆಲಂ ಮೆಹ್ಸೂದ್ ಅವರ ಮನೆಯಲ್ಲಿ ಈ ದಾಳಿ ನಡೆದಿದೆ.
ಮದುವೆ ಸಮಾರಂಭದಲ್ಲಿದ್ದ ಮನೆಯವರಿಗೆ ಶಾಕ್ ಗೆ ಒಳಗಾಗಿದ್ದು,ಎಲ್ಲೆಲ್ಲೂ ತೀವ್ರ ಆತಂಕ ಮನೆ ಮಾಡಿತು. ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ ಸಮಯದಲ್ಲಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡು ಆತ್ಮಾಹುತಿ ಮಾಡಿಕೊಂಡಿದ್ದಾನೆ.
ಘಟನೆಯಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ ಮತ್ತು 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆರಂಭದಲ್ಲಿ ಸಾವಿನ ಸಂಖ್ಯೆ 5 ಎಂದು ವರದಿಯಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಸಾವಿನ ಸಂಖ್ಯೆ ಏರಿಕೆಯಾಗಿದೆ.
ಸರ್ಕಾರದ ಪರವಾಗಿರುವ ಶಾಂತಿ ಸಮಿತಿ ನಾಯಕನನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಮೃತರಲ್ಲಿ ಶಾಂತಿ ಸಮಿತಿಯ ಮತ್ತೊಬ್ಬ ಪ್ರಮುಖ ನಾಯಕ ವಹೀದುಲ್ಲಾ ಮೆಹ್ಸೂದ್ ಕೂಡ ಸೇರಿದ್ದಾರೆ. ಬಾಂಬ್ ಸ್ಫೋಟದ ತೀವ್ರತೆಗೆ ಮದುವೆ ನಡೆಯುತ್ತಿದ್ದ ಕೊಠಡಿಯ ಛಾವಣಿ ಕುಸಿದು ಬಿದ್ದಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಸ್ಥಳೀಯರು ಮತ್ತು ರಕ್ಷಣಾ ತಂಡಗಳು ಹರಸಾಹಸ ಪಟ್ಟವು. ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.
ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯು ಅಧಿಕೃತವಾಗಿ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಈ ಭಾಗದಲ್ಲಿ ಸಕ್ರಿಯವಾಗಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ ಈ ಕೃತ್ಯದ ಹಿಂದೆ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
