(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್ನಲ್ಲಿ ಆಯೋಜಿಸಿದ್ದ ಸಮಾರಂಭವನ್ನ ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು.
ಉದ್ಘಾಟನೆ ನಂತರ ಮಾತನಾಡಿದ ಅವರು ಇಲ್ಲಿನ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘಕ್ಕೆ 40 ವರ್ಷಗಳ ಇತಿಹಾಸವಿದೆ. ಹಿಂದಿನಿಂದಲೂ ಇಲ್ಲಿನ ಹಿರಿಯ ಪತ್ರಕರ್ತರು ಪ್ರಾಮಾಣಿಕತೆಯಿಂದ ವರದಿ ಸಂಗ್ರಹಿಸಿ ಪ್ರಕಟಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇವುಗಳನ್ನು ಈಗಿನ ಪತ್ರಕರ್ತರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಾಜದ ಎಲ್ಲಾ ವರ್ಗದ ಜನರು ಹಾಗೂ ಸಂಘ, ಸಂಸ್ಥೆಗಳೊಂದಿಗೆ ಸೌಹಾರ್ದತೆ ಕಾಪಾಡಿಕೊಂಡು ಹೋಗಬೇಕು. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳೊಂದಿಗೆ ಸೋದರತ್ವದ ಹೆಜ್ಜೆಯಿಟ್ಟು ಮಾಧ್ಯಮ ಕ್ಷೇತ್ರಕ್ಕೆ ಇನ್ನಷ್ಟು ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಶಾಸಕರು ಕಿವಿ ಮಾತು ಹೇಳಿದರು.
ಭವನದ ಮುಂದುವರಿದ ಕಾಮಗಾರಿಗೆ ತಮ್ಮ ಅನುದಾನ ಸೇರಿದಂತೆ ಸಂಸದರು, ವಿಧಾನ ಪರಿಷತ್ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಸಹಕರಿಸುತ್ತೇನೆ, ಭವನದ ನಿರ್ಮಾಣಕ್ಕೆ ನಾನು ಬದ್ಧನಿದ್ದೇನೆ ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಮಾಜಿ ಶಾಸಕರಾದ ಆರ್.ನರೇಂದ್ರ ಹಾಗೂ ಜಿ.ಎನ್.ನಂಜುಂಡಸ್ವಾಮಿ ಅವರು ಡಿ.ವಿ.ಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಪತ್ರಕರ್ತರು ಆರೋಗ್ಯಕರ ವರದಿಗಳನ್ನು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಒಳ್ಳೆಯ ಕೆಲಸ ಮಾಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಮತ್ತು ಪತ್ರಕರ್ತರ ಸಂಘದ ಏಳಿಗೆಗೆ ಸ್ಥಳಿಯ ಉದ್ಯಮಿಗಳು, ಜನ ಪ್ರತಿನಿಧಿಗಳು ಹಾಗೂ ಉದಾರಿಗಳು ಆರ್ಥಿಕ ಸಹಕಾರ ನೀಡುವಂತೆ ಕೋರಿದರು.
ಇದೇ ವೇಳೆ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಅವರು ಸಂಘದ 36 ಪತ್ರಕರ್ತರ ಮಾಹಿತಿಯುಳ್ಳ ಚಾರ್ಟ್ ಬಿಡುಗಡೆ ಮಾಡಿ ಸಮಾರಂಭಕ್ಕೆ ಶುಭ ಹಾರೈಸಿದರು.
ಈ ವೇಳೆ ಸಂಘದ ನಿರ್ಗಮಿತ ತಾಲೂಕು ಅಧ್ಯಕ್ಷ ಡಿ.ಸಿದ್ದರಾಜು ಅವರು ನೂತನ ಅಧ್ಯಕ್ಷ ಚಿಕ್ಕಮಾಳಿಗೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ಚಂದ್ರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ಚಾಮುಲ್ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ತಹಸೀಲ್ದಾರ್ ಐ.ಈ.ಬಸವರಾಜು, ತಾ.ಪಂ.ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಕಾಂಗ್ರೆಸ್ ಮುಖಂಡ ಕಿನಕಹಳ್ಳಿ ಬಿ.ರಾಚಯ್ಯ, ಬಿಜೆಪಿ ಮುಖಂಡ ಎಸ್.ನಿಶಾಂತ್, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹಾದೇವ, ಸಂಸದ ಜಗದೀಶ್ ಶೆಟ್ಟರ್ ಆಪ್ತ ಸಹಾಯಕ ಎನ್.ಗಿರೀಶ್ಬಾಬು, ಶ್ರೀ ವೀರಾಂಜನೇಯ ದೇವಸ್ಥಾನ ಅರ್ಚಕ ಟಿವಿಎಸ್ ರಾಘವನ್, ರಾಜ್ಯ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಮಹೇಂದ್ರ, ಉಪಾಧ್ಯಕ್ಷ ಡಿ.ನಟರಾಜು, ಪ್ರಧಾನ ಕಾರ್ಯದರ್ಶಿ ಲಕ್ಕೂರ್ ಪ್ರಸಾದ್, ನಿರ್ದೇಶಕರಾದ ಎಂ.ಮರಿಸ್ವಾಮಿ, ಎಸ್.ರಾಜಶೇಖರ್, ಮಲ್ಲಪ್ಪ ಯಡದೊರೆ, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಎನ್.ನಟರಾಜು, ಉಪಾಧ್ಯಕ್ಷರಾದ ವಸಂತ್ ಕುಮಾರ್, ಚಂದ್ರಮೋಹನ್, ಖಜಾಂಚಿ ಪ್ರೇಮ್ ಸಾಗರ್,ಸಹ ಕಾರ್ಯದರ್ಶಿಗಳಾದ ಗಿರೀಶ್, ಸಾಗರ್, ನಿರ್ದೇಶಕರು, ಸದಸ್ಯರು ಮತ್ತಿತರರು ಹಾಜರಿದ್ದರು.
