ಇಂಡಿ: ಜಾನಪದದಲ್ಲಿ ಪಾರಂಪರಿಕ ಜ್ಞಾನ, ಜೀವನದ ಮೌಲ್ಯಗಳು, ಸಂಸ್ಕೃತಿ ಸಂಸ್ಕಾರಗಳು ಅಡಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ತಿಳಿಸಿದರು.
ಬಂಥನಾಳ ಸುಕ್ಷೇತ್ರದ ವೃಷಭ ಲಿಂಗೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಕನ್ನಡ ಜಾನಪದ ಪರಿಷತ್ ಇಂಡಿ ತಾಲೂಕು ದ್ವಿತೀಯ ಜಾನಪದ ಸಮ್ಮೇಳನವನ್ನು
ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆ ಮತ್ತು ಕಲಾವಿದರ ಸಂರಕ್ಷಣೆಗೋಸ್ಕರ ಕನ್ನಡ ಜಾನಪದ ಪರಿಷತ್ ಉದಯವಾಗಿದ್ದು, ರಾಜ್ಯದ್ಯಂತ ಜನಪದ ಕಲಾವಿದರ ಸಮೀಕ್ಷೆಯನ್ನು ಕೈಗೊಂಡು ಕಲಾವಿದರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ಕಲಾವಿದರ ಮಾಸಾಶನವನ್ನು 5000ಕ್ಕೆ ಹೆಚ್ಚಿಸಬೇಕು, ಮಾಸಾಶನ ಅರ್ಹತಾ ವಯೋಮಿತಿಯನ್ನು 45 ಕ್ಕೆ ಇಳಿಸಬೇಕು, ಕಲಾವಿದರಿಗೆ ಜೀವ ವಿಮಾ ಯೋಜನೆ ಜಾರಿಯಾಗಬೇಕು ಎಂದು ಡಾ.ಬಾಲಾಜಿ ಅಗ್ರಹಿಸಿದರು.
ಕಲಾವಿದ ಚಿದಾನಂದ ವಿಠಲ ಗೌಡಗಾವಿ ಅವರ ಸರ್ವಾಧ್ಯಕ್ಷತೆಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಪ್ರಾರಂಭವಾದ ಸಮ್ಮೇಳನ ಎಲ್ಲರ ಗಮನ ಸೆಳೆಯಿತು.
ಜಾನಪದ ಮೌಖಿಕ ಪರಂಪರೆಯಾದ ಪ್ರದರ್ಶನ ಕಲೆಗಳನ್ನು ಮುಂದಿನ ಪೀಳಿಗೆಗೆ ತರಬೇತಿ ಮೂಲಕ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಇಂಥ ಸಮ್ಮೇಳನಗಳು ಇದಕ್ಕೆ ಪೂರ್ವಕವಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಬಂಥನಾಳ ಸುಕ್ಷೇತ್ರದ ಪೀಠಾಧ್ಯಕ್ಷರು ಡಾ ವೃಷಭ ಲಿಂಗ ಮಹಾಶಿವಯೋಗಿಗಳು ಮಾತನಾಡಿ, ಜಾನಪದ ಬೆಸೆಯುವ ಕೆಲಸ ಮಾಡುತ್ತದೆ, ಪಾಶ್ಚಾತ್ಯ ಸಂಸ್ಕೃತಿ ಬೇರ್ಪಡಿಸುತ್ತದೆ, ಜಾನಪದ ಮೌಖಿಕ ಪರಂಪರೆಯಲ್ಲಿ ಹೆಚ್ಚು ದೈವರಾದನೆ ಇರುತ್ತದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ ಶ್ರೀ ಅಭಿನವ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಭಾರತದ ಭವ್ಯ ಪರಂಪರೆಗೆ ಜಾನಪದವೇ ಮೂಲ, ಜಾನಪದ ಕಲೆ ಮತ್ತು ಸಾಹಿತ್ಯದಲ್ಲಿ ನೀತಿ ಹಾಗೂ ಸಾರಾಂಶ ಅಡಗಿದೆ, ಇದನ್ನು ಮುನ್ನಡೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಕಾಜಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ ಕೆ.ಎಸ್ ಕೌಜಲಗಿ ಮಾತನಾಡಿ, ಕನ್ನಡ ಜಾನಪದ ಪರಿಷತ್ ವತಿಯಿಂದ ರಾಜ್ಯಾದ್ಯಂತ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ಜಾಗೃತಿ ಕಾರ್ಯಕ್ರಮಗಳು,ಕಮ್ಮಟ, ವಿಚಾರ ಸಂಕೀರ್ಣಗಳನ್ನು ಏರ್ಪಡಿಸಿದ್ದು,ಹಂಪಿ ಕನ್ನಡ ವಿಶ್ವವಿದ್ಯಾಲಯದೊಂದಿಗೆ ಓಡಂಬಡಿಕೆ ಆಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ ಜಾನಪದ ಬಾಲಾಜಿ ಅವರ ಪ್ರಧಾನ ಸಂಪಾದಕತ್ವದ ನೂರೊಂದು ಜಾನಪದ ಕೃತಿಯನ್ನು ಪೂಜ್ಯರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸುಮಾರು 32 ಜನಪದ ಕಲಾತಂಡಗಳು ಪ್ರದರ್ಶನ ನೀಡಿದರು, ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರು ಪಂಡಿತ್ ಅವುಜಿ ಸ್ವಾಗತಸಿ,ಎ ಎಸ್ ಸರಸಂಬಿ ನಿರೂಪಣೆ ಮಾಡಿದರು ಬೆಟ್ಟಪ್ಪ ಮಾದರ ವಂದನಾರ್ಪಣೆ ಮಾಡಿದರು.
