ಕೊಳ್ಳೇಗಾಲ: ಕಾರಿನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದವರ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ದಾಳಿ ನಡೆಸಿ 13 ಮೂಟೆಗಳ 650 ಕೆ.ಜಿ ಅಕ್ಕಿಯನ್ನು ಕಾರಿನ ಸಮೇತ ಜಪ್ತಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕೊಳ್ಳೇಗಾಲ ತಾಲ್ಲೂಕಿನ ನರೀಪುರ ಬೈಪಾಸ್ ಬಳಿ ಸ್ಯಾಂಟ್ರೋ ಕಾರಿನಲ್ಲಿ ಮಳವಳ್ಳಿ ಕಡೆಗೆ ಸಾಗಾಣಿಕೆ ಮಾಡುತ್ತಿದ್ದರ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಎನ್.ಎಂ.ಪ್ರಸಾದ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಚಲುವರಾಜು ಹಾಗೂ ಸಿಬ್ಬಂದಿ ನರೀಪುರ ಬೈಪಾಸ್ ನಲ್ಲಿ ದಾಳಿ ನಡೆಸಿದಾಗ ಆರೋಪಿ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ನಂತರ ಅಕ್ಕಿ ಮೂಟೆಯಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನೂರು ತಾಲ್ಲೂಕಿನಲ್ಲಿ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡಲಾಗುತ್ತಿತ್ತು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
