ಬೀದರ್: ಶೋಷಿತ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನಡೆಯಲು ಒಗ್ಗಟ್ಟು ಪ್ರದರ್ಶಿಸುವುದು ಅತ್ಯಗತ್ಯ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಬೀದರ್ ನಗರದ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ‘ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಒಕ್ಕೂಟ’ದ ವತಿಯಿಂದ ಆಯೋಜಿಸಲಾಗಿದ್ದ ‘ಶೋಷಿತ ಸಮುದಾಯಗಳ (ಅಹಿಂದ) ಮುಖಂಡರ ಸಮಾವೇಶ’ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನದ ರಕ್ಷಣೆ ಮತ್ತು ರಾಜಕೀಯ ಜಾಗೃತಿಯಿಂದ ಮಾತ್ರ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಅಹಿಂದ ವರ್ಗಗಳು ಒಟ್ಟಾಗಿ ನಿಲ್ಲಬೇಕು. ಈ ಸಂಘಟನೆಯು ತಾಲೂಕು ಮಟ್ಟದಿಂದ ಹಿಡಿದು ಹಳ್ಳಿ ಹಳ್ಳಿಗೂ ತಲುಪಬೇಕು. ಪ್ರತಿಯೊಬ್ಬರೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಅಧಿಕಾರ ಪಡೆಯಲು ಹಾಗೂ ಸಾಮಾಜಿಕವಾಗಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು. ನಮ್ಮ ಹಕ್ಕುಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಉಳಿಸಿಕೊಳ್ಳಲು ಸಂವಿಧಾನದ ರಕ್ಷಣೆ ಅತ್ಯಗತ್ಯ. ಸಂವಿಧಾನ ಸುರಕ್ಷಿತವಾಗಿದ್ದರೆ ಮಾತ್ರ ಹಿಂದುಳಿದ ವರ್ಗಗಳ ಭವಿಷ್ಯ ಸುಭದ್ರವಾಗಿರುತ್ತದೆ ಎಂದು ತಿಳಿಸಿದರು.
ಧರ್ಮ ಹಾಗೂ ರಾಜಕೀಯವನ್ನು ಪ್ರತ್ಯೇಕವಾಗಿ ಇರಿಸಿದಾಗ ಮಾತ್ರ ಸಮಾಜದ ಎಲ್ಲಾ ವರ್ಗಗಳೂ ಸಮಾನವಾಗಿ ಬೆಳೆಯಲು ಸಾಧ್ಯ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸಮಾನ ಗೌರವ ಹಾಗೂ ಸಾಮಾಜಿಕ ನ್ಯಾಯ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಯತೀಂದ್ರ ತಿಳಿಸಿದರು.
ಸಿದ್ದರಾಮಯ್ಯನವರು ಸಕ್ರಿಯ ಚುನಾವಣಾ ರಾಜಕೀಯದಲ್ಲಿ ಇಲ್ಲ ಎಂಬ ಕಾರಣಕ್ಕೆ ಯಾರೂ ಉತ್ಸಾಹ ಕಳೆದುಕೊಳ್ಳುವ ಅಗತ್ಯವಿಲ್ಲ. ಬದಲಾಗಿ, ಎಲ್ಲರೂ ಮತ್ತಷ್ಟು ಹುರುಪಿನಿಂದ ಮತ್ತು ಒಗ್ಗಟ್ಟಿನಿಂದ ಶೋಷಿತ ವರ್ಗಗಳ ಪರವಾಗಿ ಕೆಲಸ ಮಾಡಬೇಕಿದೆ ಎಂದು ಸಚಿವರು ಕರೆ ನೀಡಿದರು.
ಸಮಾವೇಶದಲ್ಲಿ ಸಂಸದರಾದ ಸಾಗರ್ ಖಂಡ್ರೆ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೋಡ, ಶಾಸಕ ರಹೀಮ್ ಖಾನ್, ಶಾಸಕರಾದ ಅಶೋಕ್ ಖೇಣಿ, ಶೋಷಿತ ಸಮುದಾಯಗಳ ಒಕ್ಕೂಟದ ಪ್ರಧಾನ ಸಂಚಾಲಕರಾದ ಕೆ. ಎಂ. ರಾಮಚಂದ್ರಪ್ಪ,ಅಧ್ಯಕ್ಷ ಬಸವರಾಜ ಮಾಳಗೆ, ದಲಿತ ಸಂಘರ್ಷ ಸಮಿತಿ ಸಂಚಾಲಕ ಮಾವಳ್ಳಿ ಶಂಕರ್, ಬೀದರ್ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಾ. ರಾಜಶೇಖರ ಸೇಡಂಕರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಸ್ಸಿ/ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಕಾಂಬಳೆ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಪ್ರೊ. ವಿಜಯಲಕ್ಷ್ಮಿ ಗಡ್ಡೆ, ಎಂ.ಆರ್.ಎಫ್. ಅಧ್ಯಕ್ಷರಾದ ಡಾ. ಮಕ್ಸೂದ್ ಚಂದಾ, ಎಐಸಿಸಿ ಪರಿಶಿಷ್ಟ ಜಾತಿಗಳ ವಿಭಾಗದ ಅಧ್ಯಕ್ಷ ರಾಜೇಶ್ ಲಿಲೋಟಿಯಾ ಮತ್ತಿತರರು ಹಾಜರಿದ್ದರು.
