ಮೈಸೂರು: ಪ್ರಾಧ್ಯಾಪಕರು ತರಗತಿಯಲ್ಲಿ ನಿಧಾನ ಕಲಿಕಾ ಮಕ್ಕಳನ್ನು ಗುರುತಿಸಿ ಅವರನ್ನು ಮುನ್ನೆಲೆಗೆ ತರುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಮೈಸೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ ಪ್ರತಿಮಾ ಡಿ.ಎಸ್ ಸಲಹೆ ನೀಡಿದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಕಾಲೇಜು ಶಿಕ್ಷಣ ಇಲಾಖೆ ಮತ್ತು ಮೈಸೂರು ವಲಯದ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಸಂಯುಕ್ತ ಆಶ್ರಯದಲ್ಲಿ ರೂಸಾ ಪ್ರಾಯೋಜಿತ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳ ಪ್ರಾಧ್ಯಾಪಕರಿಗೆ ನೀಡಲಾಗುತ್ತಿರುವ ಸಾಮರ್ಥ್ಯ ವೃದ್ಧಿ ತರಬೇತಿಯ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೈಸೂರಿನ ನಾಲ್ಕು ಜಿಲ್ಲೆಯ ಪ್ರಾಧ್ಯಾಪಕರಿಗೂ ಈ ಕಾರ್ಯಕ್ರಮ ತಲುಪಬೇಕು ಎಂಬುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮ ಸುಮಾರು 1000 ಪ್ರಾಧ್ಯಾಪಕರನ್ನು ತಲುಪುತ್ತಿದೆ ಎಂದು ತಿಳಿಸಿದರು.
ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ.ನಟರಾಜ್ ಸಿ ಅವರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಕೀಳರಿಮೆಯನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಾದ ಪ್ರೊ. ಎನ್ ನಾಗರಾಜ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ಸುತ್ತೂರು ಮಾಲಿನಿ ಪ್ರಾಧ್ಯಾಪಕರಿಗೆ ತರಬೇತಿ ನೀಡಿದರು.
ಕಾರ್ಯಕ್ರಮದ ಸಂಯೋಜಕರು ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಗ್ರಂಥಪಾಲಕರು ಮತ್ತು ಐಕ್ಯೂಎಸಿ ಸಂಯೋಜಕರಾದ ಡಾಕ್ಟರ್ ಮುತ್ತುರಾಜ್ ಅವರು ತರಬೇತಿಯ ಪ್ರಾಮುಖ್ಯತೆಯನ್ನು ಕುರಿತು ವಿವರಿಸಿದರು.
ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ಪ್ರಾದೇಶಿಕ ವಲಯದ ಪತ್ರಾಂಕಿತ ವ್ಯವಸ್ಥಾಪಕ ಅರವಿಂದ್, ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕಿ ಲಲಿತಾ ಕುಮಾರಿ ಕೆ, ಉಪಸ್ಥಿತರಿದ್ದರು.
ಅಧ್ಯಾಪಕರಾದ ಮಹಾಲಿಂಗ ಎಂ ಲಕ್ಷ್ಮೀಪುರ ಮತ್ತು ನಾಗೇಂದ್ರ ಎನ್ ಅವರು ನಾಡಗೀತೆ ಹಾಡಿದರು. ಪ್ರೊ. ನಳಿನಿ ಆರ್ ಪ್ರಾರ್ಥಿಸಿದರೆ,ಅಶ್ವಿನಿ ಜಿ ವಂದಿಸಿದರು.
