ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗದೆ, ನಗರದ ಐತಿಹಾಸಿಕ ಹಾಗೂ ಪಾರಂಪರಿಕ ಕಟ್ಟಡಗಳಿಗೂ ವಿಶೇಷ ದೀಪಾಲಂಕಾರ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ
ಜಗನ್ಮೋಹನ ಅರಮನೆ ಖಾಸಗಿ ಆಸ್ತಿಯಾಗಿದ್ದರೂ ಮೈಸೂರಿನ ಶ್ರೀಮಂತ ಪರಂಪರೆ ಹಾಗೂ ಹೆರಿಟೇಜ್ನ ಪ್ರಮುಖ ಭಾಗವಾಗಿದೆ. ದಸರಾ ಸಂದರ್ಭದಲ್ಲಿ ಜಗನ್ಮೋಹನ ಅರಮನೆಯೊಂದಿಗೆ ಲಲಿತಮಹಲ್, ಜಯಲಕ್ಷ್ಮಿ ವಿಲಾಸ, ಚೆಲುವಾಂಬ ವಿಲಾಸ, ಚಿತ್ತರಂಜನ್ ಅರಮನೆ ಸೇರಿದಂತೆ ನಗರದ ಪ್ರಮುಖ ಐತಿಹಾಸಿಕ ಕಟ್ಟಡಗಳಿಗೂ ಆಕರ್ಷಕ ದೀಪಾಲಂಕಾರ ಮಾಡುವ ಮೂಲಕ ಪ್ರವಾಸಿಗರಿಗೆ ಮೈಸೂರಿನ ಇತಿಹಾಸವನ್ನು ಪರಿಚಯಿಸಬೇಕು ಎಂದು ಮನವಿ ಮಾಡಿದ್ದಾರೆ
ದಸರಾ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಮೈಸೂರು ಅರಮನೆಯ ವೈಭವದ ಜೊತೆಗೆ ನಗರದ ವಿವಿಧ ಭಾಗಗಳಲ್ಲಿರುವ ಐತಿಹಾಸಿಕ ಕಟ್ಟಡಗಳ ವಾಸ್ತುಶಿಲ್ಪ ಮತ್ತು ಪರಂಪರೆಯನ್ನು ಬೆಳಕಿನ ಮೂಲಕ ಪ್ರದರ್ಶಿಸಿದರೆ ಪ್ರವಾಸಿಗರಿಗೆ ವಿಭಿನ್ನ ಅನುಭವ ದೊರೆಯಲಿದೆ ಎಂದು ಅವರು ಹೇಳಿದ್ದಾರೆ
ಮೈಸೂರು ದಸರಾ ಎಂದರೆ ಕೇವಲ ಅರಮನೆಯ ಬೆಳಕಲ್ಲ; ಮೈಸೂರಿನ ಇತಿಹಾಸವೇ ಬೆಳಗಬೇಕು. ಐತಿಹಾಸಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡುವುದು ಕೇವಲ ಅಲಂಕಾರವಲ್ಲ, ನಮ್ಮ ಪರಂಪರೆ ಮತ್ತು ಇತಿಹಾಸಕ್ಕೆ ನೀಡುವ ಗೌರವ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ದಸರಾ ಸಂದರ್ಭದಲ್ಲಿ ‘ಅರಮನೆ ಮಾತ್ರವಲ್ಲ, ಮೈಸೂರಿನ ಹೆರಿಟೇಜ್ ಕೂಡ ಬೆಳಗಲಿ’ ಎಂಬ ಆಶಯದೊಂದಿಗೆ ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳನ್ನು ದೀಪಾಲಂಕಾರದ ಮೂಲಕ ಪ್ರವಾಸಿಗರಿಗೆ ಪರಿಚಯಿಸುವಂತೆ ಸಂಬಂಧಪಟ್ಟವರು ಗಮನಹರಿಸಬೇಕೆಂದು ವಿಕ್ರಂ ಅಯ್ಯಂಗಾರ್ ಮನವಿ ಮಾಡಿದ್ದಾರೆ.
