ಮೈಸೂರು: ಪಾಂಡಿಚೆರಿಯಲ್ಲಿ ನಡೆದ 37ನೇ ಸೌತ್ ಝೋನ್ ನ್ಯಾಷನಲ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್-2026 ರಲ್ಲಿ ಮೈಸೂರಿನ ಪ್ರತಿಭಾವಂತ ಅಥ್ಲೀಟ್ ಲೇಖನ ಎಸ್. ಪ್ರಸಾದ್ ಅವರು ಗಮನಾರ್ಹ ಸಾಧನೆ ಮಾಡಿ ನಾಡಿಗೆ ಕೀರ್ತಿ ತಂದಿದ್ದಾರೆ.
ಸೆ.16 ರಿಂದ 18 ರವರೆಗೆ ನಡೆದ ಈ ಚಾಂಪಿಯನ್ಶಿಪ್ನಲ್ಲಿ ಲೇಖನ ಅವರು 100 ಮೀಟರ್ ಮತ್ತು 200 ಮೀಟರ್ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಲಾ ಒಂದು ಬೆಳ್ಳಿ ಪದಕದಂತೆ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.
ಇದಲ್ಲದೆ 4×100 ಮೀಟರ್ ಮಿಕ್ಸ್ಡ್ ರಿಲೇ ಓಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಮೂಲಕ ಒಟ್ಟು ಮೂರು ಪದಕಗಳನ್ನು (ಒಂದು ಚಿನ್ನ, ಎರಡು ಬೆಳ್ಳಿ) ಗೆದ್ದು ಮೈಸೂರಿಗೆ ಕೀರ್ತಿ ತಂದಿದ್ದಾರೆ.
ಅವರ ಸಾಧನೆಗೆ ಕುಟುಂಬಸ್ಥರು, ತರಬೇತುದಾರ ಸುಹಾಸ್ ಗೌಡ, ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾ ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.
