ದಾವಣಗೆರೆ: ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ದಾವಣಗೆರೆ ಮಹಾನಗರಪಾಲಿಕೆ ಹಾಗೂ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸಿವಿಲ್ ಕಾಮಗಾರಿಗಳ ಪ್ರಗತಿ, ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳು, ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳು, ನಗರದಲ್ಲಿ ಕುಡಿಯುವ ನೀರಿನ ಲಭ್ಯತೆ ಹಾಗೂ ಭವಿಷ್ಯದ ನೀರು ಸರಬರಾಜು ಯೋಜನೆಗಳ ಕುರಿತು ಸಚಿವರು ಪರಿಶೀಲಿಸಿದರು.
ಈಗಾಗಲೇ ಅನುಷ್ಠಾನಗೊಳಿಸಲಾಗಿರುವ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ವಿವಿಧ ವಸತಿ ಯೋಜನೆಗಳ ಪ್ರಗತಿ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆಗಳನ್ನು ನೀಡಿದರು.
ನಗರಾಭಿವೃದ್ಧಿಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು, ಸಾರ್ವಜನಿಕರಿಗೆ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದು ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಕಟ್ಟುನಿಟ್ಟಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ಡಾ.ಯತೀಂದ್ರ ಸೂಚಿಸಿದರು.
ಸಭೆಯಲ್ಲಿ ದಾವಣಗೆರೆ ಶಾಸಕರಾದ ಎಸ್. ಎಸ್. ಮಲ್ಲಿಕಾರ್ಜುನ್, ಸಮರ್ಥ್ ಶಾಮನೂರು, ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಮಹಾನಗರಪಾಲಿಕೆ ಆಯುಕ್ತರಾದ ಡಾ. ಮಹಾಂತೇಶ್ ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
