ಮೈಸೂರು: ನೈರುತ್ಯ ರೈಲ್ವೆಯ ಮಹಾಪ್ರಬಂಧಕರಾದ ಪಿ. ಅನಂತ್ ಅವರು ಮೈಸೂರು ಕೇಂದ್ರ ಕಾರ್ಯಾಗಾರ, ಅಶೋಕಪುರಂ, ಮೈಸೂರು ರೈಲು ನಿಲ್ದಾಣ ಮತ್ತು ಗೂಡ್ಸ್ ಟರ್ಮಿನಲ್ ಸೇರಿದಂತೆ ಹಲವು ಪ್ರಮುಖ ರೈಲ್ವೆ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೈಸೂರು ಕೇಂದ್ರ ಕಾರ್ಯಾಗಾರದಲ್ಲಿ ಪ್ರಧಾನ ಮೆಕ್ಯಾನಿಕಲ್ ಇಂಜಿನಿಯರ್ ನವೀದ್ ತಾಲಿಬ್, ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಶಮ್ಮಾಸ್ ಹಮೀದ್, ಮುಖ್ಯ ಕಾರ್ಯಾಗಾರ ವ್ಯವಸ್ಥಾಪಕ ಸಂದೀಪ್ ಕುಮಾರ್ ವರ್ಮಾ ಹಾಗೂ ಉಪ ಮುಖ್ಯ ಕಾರ್ಯಾಗಾರ ವ್ಯವಸ್ಥಾಪಕ ಭೇಶ್ ದತ್ ಅವರು ಮಹಾಪ್ರಬಂಧಕರಿಗೆ ಸಾಥ್ ನೀಡಿದರು.
ಈ ವೇಳೆ ವೀಲ್ ಶಾಪ್, ಬೋಗಿ ರಿಪೇರಿ ಶಾಪ್, ಕ್ಯಾರೇಜ್ ಬಾಡಿ ರಿಪೇರಿ ಮತ್ತು ಹೆವಿ ಕೊರೋಶನ್ ಶಾಪ್, ಏರ್ ಬ್ರೇಕ್ ಮತ್ತು ಎಸಿ ಶಾಪ್, ಪೇಂಟ್ ಮತ್ತು ಟ್ರಿಮ್ಮಿಂಗ್ ಶಾಪ್ಗಳನ್ನು ಪರಿಶೀಲಿಸಿದರು.
ಕಾರ್ಯಾಗಾರದ ನಿರ್ವಹಣೆ ಮತ್ತು ಉತ್ಪಾದನಾ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡಿದ ಅವರು, ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಿಬ್ಬಂದಿಯೊಂದಿಗೆ ಸಂವಹನ ನಡೆಸಿ,ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಸಿಬ್ಬಂದಿಯ ಶ್ರಮ ಮತ್ತು ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿದರು.
ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯಾಚರಣಾ ದಕ್ಷತೆ, ಪ್ರಮುಖ ವಿಷಯಗಳು ಮತ್ತು ಕಾರ್ಯಾಗಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅನಂತ್ ಅವರು ಚರ್ಚಿಸಿದರು.
ಪರಿಶೀಲನೆಯ ಭಾಗವಾಗಿ ಅವರು ಮೈಸೂರು ರೈಲು ನಿಲ್ದಾಣ, ಅಶೋಕಪುರಂ ರೈಲು ನಿಲ್ದಾಣ, ಮೈಸೂರು ನ್ಯೂ ಗುಡ್ಸ್ ಟರ್ಮಿನಲ್ ಹಾಗೂ ಮೈಸೂರು ರೈಲ್ವೆ ವಸತಿ ಗೃಹಗಳಿಗೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಹಾಗೂ ಇತರ ವಿಭಾಗೀಯ ಅಧಿಕಾರಿಗಳು ಉಪಸ್ಥಿತರಿದ್ದರು.
