ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದ ತುಂಬ ನೆರೆದಿದ್ದ ಭಕ್ತರ ಕಂಠದಿಂದ ಹನುಮನಾಮ ಸ್ಮರಣೆ ಮೊಳಗುತ್ತಿದ್ದಂತೆ ಒಂದು ಕ್ಷಣ ನಮಗೇ ಅರವಿಲ್ಲದೆ ಜಯ ಹನುಮಾನ್ ಎಂಬ ಉದ್ಘಾರದೊಂದಿಗೆ ಕೈಗಳು ತಾಳ ಹಾಕಲಾರಂಭಿಸಿದ್ದವು.
ಹೌದು ಇದು ನಿಜ.ಅವಧೂತ ದತ್ತಪೀಠದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಾಮೂಹಿಕ ಶ್ರೀ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞದಲ್ಲಿ
ನಿಜಕ್ಕೂ ಭಕ್ತಿ ಮೇಳೈಸಿತ್ತು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಸೇರಿದ್ದ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರ ಕಂಠದಲ್ಲಿ ಹನುಮ ಸ್ಮರಣೆ ಮಾರ್ದನಿಸಿತು.
ಇಡೀ ಮೈದಾನ ಕೇಸರಿ ಬಣ್ಣದಿಂದ ಕಂಗೊಳಿಸಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಯವರೊಂದಿಗೆ ಪವಮಾನ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದ ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು, ವೇದಿಕೆಗೆ ಆಗಮಿಸಿದರು
ಈ ವೇಳೆ ಶಾಸಕರುಗಳಾದ ಶ್ರೀವತ್ಸ, ಕೆ. ಹರೀಶ್ ಗೌಡ, ಜಿ.ಟಿ. ದೇವೇಗೌಡ ಹಾಗೂ ನಗರದ ಪ್ರಮುಖ ಗಣ್ಯರು ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.
ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನ್ ಕಿ’ ಎಂಬ ಜಯ ಘೋಷದೊಂದಿಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸುಂದರಕಾಂಡದ ಕಥಾ ನಿರೂಪಣೆಯೊಂದಿಗೆ ಸಾಗಿದ ಈ ಪಾರಾಯಣವು ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ನಡೆಯಿತು.
ಈ ಅವಧಿಯಲ್ಲಿ ಒಟ್ಟು 18 ಬಾರಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರ ಕೈಯಲ್ಲಿ ಕೇಸರಿ ಧ್ವಜಗಳು ರಾರಜಿಸುತ್ತಿದ್ದವು. ಹಾಗಾಗಿ ಮೈದಾನದ ತುಂಬಾ ಕೇಸರಿ ವರ್ಣದ ಕಳೆ ಕಟ್ಟಿತ್ತು.
ನಮ್ಮ ರಾಜ್ಯವಲ್ಲದೆ ಬೇರೆ,ಬೇರೆ ರಾಜ್ಯಗಳು,ವಿದೇಶಗಳಿಂದಲೂ ಭಕ್ತಸಾಗರವೇ ಹರಿದುಬಂದಿತ್ತು.
ವಿದೇಶಿ ಭಕ್ತರು ಹಾಗೂ ದೇಶಾದ್ಯಂತ ಆಗಮಿಸಿದ್ದ ಭಕ್ತರು ಭಗವಧ್ವಜ ಹಿಡಿದು ಹನುಮಸ್ಮರಣೆ ಮಾಡುತ್ತಾ ನೃತ್ಯ ಮಾಡಿ ಭಕ್ತಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಮಹಾಯಜ್ಞ ಸಂಪನ್ನಗೊಂಡಿತು.

