ಮೈಸೂರು: ಹೊಸಗನ್ನಡದ ಹೂವುಗಳು ಕಂಗೊಳಿಸುತ್ತಿದ್ದರೆ ಅದಕ್ಕೆ ಹಳಗನ್ನಡವೇ ಬೇರು ಎಂದು ಹಿರಿಯ ವಿದ್ವಾಂಸ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಬಣ್ಣಿಸಿದರು.
ಹಳೆಗನ್ನಡ ಕಾವ್ಯಗಳು ಕಠಿಣವಾದವುಗಳಲ್ಲ, ಅವುಗಳನ್ನು ಓದುತ್ತಾ ಹೋದಂತೆ ವ್ಯಾಖ್ಯಾನಗಳು ಸುಲಭವಾಗಿ ಅರ್ಥವಾಗುತ್ತವೆ ಎಂದು ಅವರು ಹೇಳಿದರು.
ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳ ಹಳಗನ್ನಡ ಓದು ಮತ್ತು ವ್ಯಾಖ್ಯಾನ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪದ್ಯಗಳನ್ನು ಬೋಧಿಸುವಾಗ ಕವಿ ಬಳಸಿರುವ ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಉತ್ಪಲಮಾಲೆ ಛಂದಸ್ಸು ಮತ್ತು ಭಾಷೆಯ ತಿಳಿವಳಿಕೆಯನ್ನು ಇಟ್ಟುಕೊಂಡು ಬೋಧಿಸಬೇಕು ಎಂದು ಅವರು ಸಲಹೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಹಳಗನ್ನಡದ ಓದು, ಅಭ್ಯಾಸ ಮತ್ತು ಬೋಧನೆ ಕಡಿಮೆಯಾಗುತ್ತಿದೆ, ಅದನ್ನು ಪುನಶ್ಚೇತನಗೊಳಿಸಲು ಇಂತಹ ಕಾರ್ಯಾಗಾರಗಳು ಅಗತ್ಯ ಎಂದು ಹಂಪಾ.ನಾಗರಾಜಯ್ಯ ಅಭಿಪ್ರಾಯಪಟ್ಟರು.
ಮಾನವನ ಜೀವನದಲ್ಲಿ ಭೋಗದ ಅನುಭವದ ನಂತರವೇ ವೈರಾಗ್ಯ ಮತ್ತು ಮೋಕ್ಷದ ಹಾದಿ ಎಂಬುದನ್ನು ಪಂಪ ತನ್ನ ಆದಿಪುರಾಣದಲ್ಲಿ ವರ್ಣಿಸಿದ್ದಾನೆ. ಸಂಸ್ಕೃತದ ಆದಿಪುರಾಣವನ್ನು ಕನ್ನಡಕ್ಕೆ ತಂದಾಗ ಪಂಪ ಅನುವಾದ ಮಾಡದೆ, ಕನ್ನಡದ ಜಾಯಮಾನಕ್ಕೆ ಅನುಗುಣವಾಗಿ ಮರುಸೃಷ್ಟಿ ಮಾಡಿದ್ದಾನೆ. ಆದ್ದರಿಂದ ಪಂಪನ ಆದಿಪುರಾಣವು ವಿಕ್ರಮಾರ್ಜುನ ವಿಜಯಕ್ಕಿಂತ ಯಾವುದರಲ್ಲೂ ಕಡಿಮೆಯಿಲ್ಲದ ಅಪೂರ್ವ ಕಾವ್ಯವಾಗಿದೆ ಎಂದು ತಿಳಿಸಿದರು.
ಭಾಷೆಯ ಮೇಲಿನ ಆಸಕ್ತಿ ಕುಸಿತ – ಕುಲಪತಿ ಕಳವಳ
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್ ಮಾತನಾಡಿ, ಇಂದು ಅಧ್ಯಾಪಕರು ಪರೀಕ್ಷೆಗಾಗಿ ಪಾಠ ಮಾಡುತ್ತಿದ್ದಾರೆ, ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಿದ್ದಾರೆ. ಇದರಿಂದ ಭಾಷೆ ಮತ್ತು ಸಾಹಿತ್ಯದ ಮೇಲಿನ ನೈಜ ಆಸಕ್ತಿ ಕಡಿಮೆಯಾಗಿದೆ. ಇದಕ್ಕೆ ಕಾರಣರಾರು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಕನ್ನಡ ಬೆಳೆದಿರುವುದಕ್ಕೆ ಉಪನ್ಯಾಸಕರು ಮತ್ತು ಶಿಕ್ಷಕರೇ ಕಾರಣ. ತರಗತಿಯಲ್ಲಿ ಆಸಕ್ತಿದಾಯಕವಾಗಿ ಬೋಧಿಸಿದಾಗ ಮಾತ್ರ ವಿದ್ಯಾರ್ಥಿಗಳು ಭಾಷೆಯತ್ತ ಆಕರ್ಷಿತರಾಗುತ್ತಾರೆ ಎಂದು ಹೇಳಿದರು.
ಡಿಜಿಟಲೀಕರಣ ಮತ್ತು ತಾಳೆಗರಿಗಳ ಸಂರಕ್ಷಣೆ ನಡೆಯುತ್ತಿದ್ದರೂ ಅವುಗಳನ್ನು ಓದಿ ಅರ್ಥೈಸಿಕೊಳ್ಳುವ ನಿಪುಣರ ಕೊರತೆ ಇದೆ. ಮುಂದಿನ ಪೀಳಿಗೆಗೆ ಹಳಗನ್ನಡದ ಅರಿವು ಮೂಡಿಸದಿದ್ದರೆ ಸಾಹಿತ್ಯಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಪ್ರೊ.ಲೋಕನಾಥ್ ಅವರು ಕಳವಳ ವ್ಯಕ್ತಪಡಿಸಿದರು.
