ಗುಂಡ್ಲುಪೇಟೆ: ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ ಪರಿಣಾಮ ಅದು ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕು ಪಡಗೂರು ಗ್ರಾಮದಲ್ಲಿ ನಡೆದಿದೆ.
ಇದನ್ನು ಕಂಡ ರೈತ ಹೆದರದೆ ಹಸು ರಕ್ಷಿಸಲು ಹರಸಾಹಸ ಪಟ್ಟಿದ್ದಲ್ಲದೆ ಹುಲಿಯನ್ನು ಬಡಿಗೆಯಿಂದ ಥಳಿಸಿ ಜೋರಾಗಿ ಕೂಗಿಕೊಂಡಿದ್ದು ಹುಲಿ ಓಡಿಹೋಗಿದೆ,ಆದರೆ ಹಸು ಸಾವನ್ನಪ್ಪಿದೆ.
ಗ್ರಾಮದ ಗುರುಸಿದ್ದಪ್ಪ ಎಂಬವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ಚಿರತೆ ಮರಿಗಳು ಪತ್ತೆಯಾಗಿದ್ದ ಶಿವಕುಮಾರ್ ಎಂಬ ರೈತನ ಜಮೀನಿನಲ್ಲೇ ಹುಲಿ ಹಸುವಿನ ಮೇಲೆ ದಾಳಿ ಮಾಡಿದ ಘಟನೆ ನಡೆದಿರುವುದು ಆತಂಕಕ್ಕೆ ಎಡೆಮಾಡಿದೆ.
ಹಸು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಪಡಗೂರು ಗ್ರಾಮದಲ್ಲಿ ಹುಲಿ ಚಿರತೆ ಉಪಟಳ ಉಲ್ಬಣಗೊಂಡಿದ್ದು ಕೂಂಬಿಂಗ್ ಕಾರ್ಯಚರಣೆಗೆ ಮುಂದಾಗಬೇಕು ಎಂದು ರೈತ ಮುಖಂಡ ಶಿವಕುಮಾರ್ ಮತ್ತಿತರರು ಒತ್ತಾಯಿಸಿದ್ದಾರೆ.
ಹಾಡಹಗಲೇ ರೈತರ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮೃಗಗಳಿಂದ ಕೃಷಿ ಚಟುವಟಿಕೆಗೆ ಹೋಗಲು ರೈತರು ಹೆದರುತ್ತಿದ್ದಾರೆ ತಕ್ಷಣ ಕಾಡು ಪ್ರಾಣಿಗಳ ಉಪಟಳ ತಪ್ಪಿಸಬೇಕಿದೆ.
