ಮೈಸೂರು: ಈ ಬಾರಿ ಬೇಸಿಗೆಗೂ ಮೊದಲೆ ನಾಗರಹೊಳೆ ಅರಣ್ಯ ಪ್ರದೇಶದ ಕೆರೆಗಳು ಪುನಶ್ಚೇತನಗೊಂಡಿದ್ದರಿಂದ ವನ್ಯಜೀವಿಗಳಿಗೆ ನೀರಿನ ಕೊರತೆ ದೂರವಾದಂತಾಗಿದೆ.
ಕಾಡು ಪ್ರಾಣಿಗಳು ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಬಳಲಬಾರದೆಂಬ ಉದ್ದೇಶದಿಂದ ಈ ಬಾರಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಸಿಗೆಗೂ ಮುನ್ನವೇ ಹಲವು ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು.
ಇದರಿಂದಾಗಿ ಬತ್ತಿದ ಕೆರೆಗಳಿಗೆ ನೀರು ಬಂದಿದ್ದು, ಪ್ರಾಣಿಗಳಿಗೆ ನೀರಿನ ಅಭಾವ ತಪ್ಪಿದೆ.
ಹುಲಿಗಳು ಹಾಗೂ ಹೆಚ್ಚು ಆನೆಗಳಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಣಿಕಂಠನ್ ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಿನೀವಬಲ್ ಎನರ್ಜಿ ಡೆವಲಪ್ ಮೆಂಟ್ ಲಿಮಿಟೆಡ್ ಸಹಯೋಗದಲ್ಲಿ ಕೆರೆಗಳಿಗೆ ಸೋಲಾರ್ ಪಂಪ್ಗಳ ಮುಖಾಂತರ ನೀರುಣಿಸುವ ಯೋಜನೆ ಹಮ್ಮಿಕೊಂಡಿದ್ದರು.
ಕಾಡಿನಲ್ಲಿ ನೀರಿನ ಕೊರತೆ ನೀಗಿಸಲು ಸೋಲಾರ್ ಶಕ್ತಿಯಿಂದ ಚಾಲನೆಯಾಗುವ ೧೮ ಪಂಪ್ ಗಳನ್ನು ಅಳವಡಿಸಿದ್ದರು.
ಈಗ ೧೦ ಕೆರೆಗಳನ್ನು ೧೬ರಿಂದ ೧೮ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.
ಈಗ ಕೂಡಾ ಕಾಡಿನಲ್ಲಿರುವ ನೀರಿನ ಪ್ರಮುಖ ಮೂಲಗಳಾದ ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯ ನಡೆಯುತ್ತಿದೆ.
ಮೊದಲ ಹಂತದಲ್ಲಿ ನಾಗರಹೊಳೆ ವ್ಯಾಪ್ತಿಯ ಒಣ ಪ್ರದೇಶಗಳಾದ ಅಂತರಸಂತೆ, ಮೇಟಿಕುಪ್ಪೆ ಆನೆ ಚೌಕೂರು, ವೀರನಹೊಸಹಳ್ಳಿ, ಇನ್ನಿತರ ಪ್ರದೇಶಗಳ ೧೦ ಕೆರೆಗಳನ್ನು ಬೇಸಿಗೆಗೂ ಮುನ್ನವೇ ಅಭಿವೃದ್ಧಿಗೊಳಿಸಲಾಗಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ತಿಳಿಸಿದ್ದಾರೆ.
ಕೆರೆಗಳಿಗೆ ನೀರು ಹರಿದು ಬರುವ ಕಾಲುವೆಗಳು ಹಾಗೂ ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವ ಕಾಲುವೆಗಳು ಹಾಗೂ ಕೆರೆಯಲ್ಲಿನ ಹೂಳನ್ನು ತೆಗೆಸಲಾಗಿದೆ. ಹಾಗಾಗಿ ಇತ್ತೀಚೆಗೆ ಬಿದ್ದ ಮಳೆಯ ನೀರು ಸರಾಗವಾಗಿ ಕೆರೆಯ ಒಡಲನ್ನು ಸೇರಿದೆ.ಬತ್ತಿದ ಕೆರೆಗಳಲ್ಲಿ ನೀರು ಸಂಗ್ರಹಣೆ ಯಾಗುತ್ತಿದೆ.
ಕೆರೆ, ಕಾಲುವೆಗಳ ಸುತ್ತ ಹಸಿರು ಹುಲ್ಲು ಬೆಳೆದಿದೆ. ಲಂಟಾನ ತೆಗೆದ ಜಾಗದಲ್ಲಿಯೂ ಹುಲ್ಲು ಬೆಳೆದಿದೆ. ಕೆರೆ ಬಳಿಯ ಮರಗಿಡಗಳೂ ಹಸಿರಿನಿಂದ ನಳನಳಿಸುತ್ತಿವೆ. ಇದರಿಂದಾಗಿ ಆನೆಗಳು, ಜಿಂಕೆಗಳು ಇನ್ನಿತರ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ ದೊರೆಯುತ್ತಿದೆ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೀಮಾ ತಿಳಿಸಿದ್ದಾರೆ.
