ಮೈಸೂರು: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚುವುದಕ್ಕೆ ಆದೇಶ ಹೊರಡಿಸಿರುವುದಕ್ಕೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಖಂಡಿಸಿದೆ.
ಬಡವರ ಬಗ್ಗೆ ಕನಿಷ್ಠ ಕಾಳಜಿ, ಸಂವೇದನೆ ಇಲ್ಲದ ಸರ್ಕಾರ ಮೂರ್ಖತನದ ನಿರ್ಧಾರ ಕೈಗೊಂಡಿದೆ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಮಹಿಳಾ ಪ್ರಮುಖ ನಾಗಮಣಿ ಕಿಡಿಕಾರಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತಹಶೀಲ್ದಾರರಾದ ಶಿವಪ್ರಸಾದ್ ಅವರಿಗೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನ ಮಂತ್ರಿ ಜನ ಔಷದ ಕೇಂದ್ರ ಮುಚ್ಚಬಾರದೆಂದು ಮನವಿ ಪತ್ರ ಸಲ್ಲಿಸಿ ಈ ಮೂಲಕ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ನಾಗಮಣಿ ಅವರು,
ಕಡುಬಡವರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿ ಪೂರೈಸುವ ದೃಷ್ಟಿಯಡಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಯೋಜನೆಯಡಿ ಜನೌಷಧಿ ಕೇಂದ್ರ ತೆರೆದಿತ್ತು ಎಂದು ಹೇಳಿದರು.
ಇದರನ್ವಯ ಈಗಾಗಲೇ ದೇಶಾದ್ಯಂತ 16,290 ಜನೌಷಧಿ ಕೇಂದ್ರ, ಕರ್ನಾಟಕ ರಾಜ್ಯದಲ್ಲಿ1459 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಇದರಲ್ಲಿ ಸುಮಾರು 207ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿವೆ. ಇವುಗಳನ್ನು ಮುಚ್ಚಲು ಆದೇಶಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ನಡೆಯುತ್ತಿರುವ ಜನೌಷಧಿ ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶ ಹೊರಡಿಸಿರುವುದು ನೋಡಿದರೆ ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಈ ರಾಜ್ಯದ ಬಡವರ, ದೀನದಲಿತರ ಬಗ್ಗೆ ಕಾಳಜಿ ಇಲ್ಲ ಅನಿಸುತಿದೆ, ಕಾಳಜಿ ಇದ್ದರೆ ಕೂಡಲೇ ಈ ಆದೇಶವನ್ನು ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ಪೂರೈಸಲಾಗುತ್ತಿದ್ದು ಜನೌಷಧಿ ಕೇಂದ್ರಗಳಲ್ಲಿ ರೋಗಿಗಳು ಹಣ ಕೊಟ್ಟು ಔಷಧ ಖರೀದಿಸುವುದು ಬೇಡ ಎಂದು ಆರೋಗ್ಯ ಸಚಿವರು ಸಮಜಾಯಿಷಿ ನೀಡಿದ್ದಾರೆ. ಆದರೆ, ಎಷ್ಟು ಆಸ್ಪತ್ರೆಗಳಲ್ಲಿ ಔಷಧ ಪೂರ್ಣಪ್ರಮಾಣದಲ್ಲಿ ಲಭ್ಯವಾಗುತ್ತಿವೆ ಎಂದು ನಾಗಮಣಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್, ಬಿಜೆಪಿ ಮುಖಂಡ ಆನಂದ್, ಆನಂದ್ ದಯಾನಂದ, ಹರ್ಷ, ರಾಮಚಂದ್ರ ರಾವ್, ಕಲೀಮ್ ಖಾನ್ ಮತ್ತಿತರರು ಹಾಜರಿದ್ದರು.
