ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ಬಂಧಿಸದೆ ತಡಮಾಡಿದ್ದಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ ಅವರು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಪೊಲೀಸ್ ಆಯುಕ್ತರ ಹಳೇ ಕಚೇರಿ ಕಟ್ಟಡದಲ್ಲಿರುವ ನಗರ ಸೈಬರ್ ಠಾಣೆಯ ಎಸಿಪಿ ಮನೋಜ್ ಕುಮಾರ್ ಅವರನ್ನು ಹರೀಶ್ ಗೌಡ ತಮ್ಮ ಪತ್ನಿ ವರ್ಷ ಹಾಗೂ ವಕೀಲರೊಂದಿಗೆ ಭೇಟಿ ಮಾಡಿ ಚರ್ಚಿಸಿದರು.
13 ದಿನ ಕಳೆದರೂ ಎಫ್ ಐ ಆರ್ ದಾಖಲಾಗಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಬಗ್ಗೆ ದೂರು ನೀಡಿ ಕಾನೂನು ಕ್ರಮ ಜರುಗಿಸುವಂತೆ ಕೋರಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜೂನ್ 26ರಂದು ದೂರು ನೀಡಿದ್ದೇವೆ, 13 ದಿನಗಳು ಕಳೆದಿದೆ, ಎಫ್ ಐಆರ್ ದಾಖಲಿಸದೆ ವಿಳಂಬ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ ಇದರ ಹಿಂದೆ ಯಾರಿದ್ದಾರೆ, ಯಾರ ಒತ್ತಡವಿದೆ ಎಂದು ಪ್ರಶ್ನಿಸಿದರು.
ಈ ವೇಳೆ ಎಸಿಪಿ ಮನೋಜ್ ಕುಮಾರ್ ಸಮಜಾಯಿಷಿ ನೀಡಲು ಮುಂದಾದರೂ ಶಾಸಕರು ಅದನ್ನು ಒಪ್ಪದೆ, ಒಬ್ಬ ಮಹಿಳೆಗೆ ಅಸಭ್ಯ ಕಮೆಂಟ್ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು,ಒಬ್ಬ ಶಾಸಕರ ಪತ್ನಿಗೆ ಈ ರೀತಿಯಾಗಿದೆ. ಮೊದಲ ಬಾರಿಗೆ ನನ್ನ ಪತ್ನಿಯಿಂದ ದೂರು ಕೊಡಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವರ್ಷ ಗೌಡ ಅವರ ಪರ ವಕೀಲ ಸಾಗರೆ ಶಿವಕುಮಾರ್ ಅವರು ಕಾನೂನು ಅಂಶಗಳು ಮತ್ತು ದೂರಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿ ತಕ್ಷಣವೇ ಎಫ್ ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಭೇಟಿ ಬಳಿಕ ಮಾತನಾಡಿದ ಶಾಸಕ ಹರೀಶ್ ಗೌಡ, ನಾವು ಜೂನ್ 26ರಂದು ದೂರು ನೀಡಿದ್ದೇವೆ. ತಾಂತ್ರಿಕ ಕಾರಣಗಳ ಬಗ್ಗೆ ಎರಡು ಕ್ಲಾಸಿಫಿಕೇಶನ್ ಕೇಳಿದ್ದರು. ಅದಕ್ಕೆ ತಕ್ಕಂತೆ ಈಗ ಮಾಹಿತಿಯನ್ನು ನೀಡಲಾಗಿದೆ. ಒಬ್ಬ ಮಹಿಳೆಗೆ ಕೆಟ್ಟ ಮೆಸೇಜ್ ಹಾಕಬಾರದು ಎಂಬ ಕಾರಣಕ್ಕೆ ದೂರು ನೀಡಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆಯನ್ನು ಎಸಿಪಿ ನೀಡಿದ್ದಾರೆ. ಕಮೆಂಟ್ ಹಾಕಿದವನನ್ನು ಪತ್ತೆ ಹಚ್ಚಿ ಕರೆ ತರಲಾಗುವುದು ಎಂದು ಹೇಳಿದ್ದಾರೆ. ಹಾಗಾಗಿ ಎರಡು ದಿನಗಳ ಕಾಲ ಕಾದು ನೋಡುತ್ತೇವೆ ಎಂದು ತಿಳಿಸಿದರು.
ಯಾರ ಬಗ್ಗೆಯೂ ನಮಗೆ ಅನುಮಾನವಿಲ್ಲ,ಆರೋಪಿ ಪತ್ತೆ ಆಗಬೇಕು. ಒಬ್ಬ ಮಹಿಳೆಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ನನ್ನ ಪತ್ನಿ ಹೋರಾಟ ಆರಂಭಿಸಿದ್ದಾರೆ. ಈ ಹೋರಾಟದಲ್ಲಿ ನಾನೂ ಕೈಜೋಡಿಸುತ್ತೇನೆ. ರಾಜಕೀಯ ಕಾರಣಕ್ಕೆ ಹೋರಾಟ ಮಾಡಲಿ. ಆದರೆ ವೈಯಕ್ತಿಕ ವಿಚಾರವನ್ನು ಪ್ರಸ್ತಾಪಿಸಿ ಮಾಡಬಾರದು ಎಂದು ಹೇಳಿದರು.
