ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹಾಲಿ ಮುಖ್ಯಮಂತ್ರಿ 600 ಕೋಟಿ ಬೃಹತ್ ಮೊತ್ತದ ಡೀಲ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಹೆಚ್ ಡಿ ಕೆ, ಹೌದು ಡೀಲ್ ಕೊಟ್ಟಿರೋದು ಅದು ಬೇರೆ ಯಾರೂ ಅಲ್ಲ ಈಗಿನ ಮಹಾನ್ ಮುಖ್ಯಮಂತ್ರಿಗಳೇ ಒಂದು ಕುಟುಂಬವನ್ನು ಮುಗಿಸಲು ಹೇಳಿರುವುದು. ಅದು ದೇವೇಗೌಡರ ಕುಟುಂಬವೇ ಆಗಿದೆ. ನಮ್ಮ ಕುಟುಂಬವನ್ನು ಮುಗಿಲುಸಲು ಈ ಮುಖ್ಯಮಂತ್ರಿ ನಡೆಸಿರುವ ಕುತಂತ್ರ ಒಂದೆರಡಲ್ಲ. ಅನೇಕ ಕುತಂತ್ರಗಳನ್ನು ಅವರು ಮಾಡಿದ್ದು ಅದರಲ್ಲಿ 600 ಕೋಟಿ ಸುಫಾರಿ ಡೀಲ್ ಕೂಡ ಒಂದು. ಅವರು ಈ ಕೃತ್ಯ ಎಸಗಿದ್ದಾರೆ ಎಂಬುದರಲ್ಲಿ ಎರಡು ಮಾತೇ ಇಲ್ಲ ಸಂಶಯವೇ ಇಲ್ಲ ಎಂದು ಪುನರುಚ್ಛರಿಸಿದರು.
ಅದರಿಂದಲೇ ಇದೆಲ್ಲವನ್ನು ತನಿಖೆ ಮಾಡಬೇಕು ಎಂದು ನಾನು ಹೇಳಿದ್ದು. ಸ್ಟಿಂಗ್ ಮಾಡಿದ ಪಾತಕಿಗಳನ್ನು ಬಂಧಿಸಿ ಎಂದರೆ ಅವರಿಗೆ ಸುರಕ್ಷಿತವಾಗಿ ನಿರೀಕ್ಷಣಾ ಜಾಮೀನು ಸಿಗುವಂತೆ ಮಾಡಿ, ಅದಕ್ಕೆ ಸಂಬಂಧ ಇಲ್ಲದವರನ್ನು ಕಾಡುತ್ತಿದ್ದಾರೆ. ಇವರ ಪಾಪದ ಕೊಡ ತುಂಬಿದೆ. ಆ ಭಗವಂತನೇ ಇದೆಲ್ಲವನ್ನು ಹೊರಗೆ ತರುತ್ತಿದ್ದಾನೆ ಎಂದು ಹೇಳಿದರು.
ಕರ್ನಾಟಕ ದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳ ನಡುವೆ ಒಂದು ಸೂಕ್ಷ್ಮ ವಿಚಾರದ ತನಿಖೆ ನಡೆಯುತ್ತಿದೆ. ಇನ್ನೂ ಐದು ದಿನ ಸಮಯ ಕೊಡುತ್ತೇನೆ. ಏನು ಮಾಡುತ್ತಾರೋ ನೋಡೋಣ. ನಮ್ಮ ಯುವಕರು ಭಯಪಡುವುದು ಬೇಡ. ಅವರಿಗೆ ನಾನು ಹೇಳುವುದು ಇಷ್ಟೇ, ಪೊಲೀಸರ ತನಿಖೆಗೆ ಸಹಕರಿಸಿ. ಅವರು ಕರೆದಾಗ ಹೋಗಿ. ಕೇಳಿದ ಉಪಕರಣಗಳನ್ನು ಕೊಡಿ. ಆಗ ಇವರ ತನಿಖೆ ಯಾವ ದಿಕ್ಕಿನತ್ತ ಹೋಗುತ್ತಿದೆ ಎಂದು ತಿಳಿಯುತ್ತದೆ. ನನಗೂ ಒಳಗೆ ಏನು ನಡೆಯುತ್ತಿದೆ ಎಂಬ ಮಾಹಿತಿ ಇದೆ. ಸಿದ್ದರಾಮಯ್ಯ ಅವರು ಹಾಗೂ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಕೂಡ ಗಮನಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಈ ತನಿಖೆಯ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಕೂಡ ಅನುಮಾನ ಇದೆ. ಒಬ್ಬ ವ್ಯಕ್ತಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಈ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಬಗ್ಗೆ ಅಸಲಿ ಅಪರಾಧಿಗಳನ್ನು ಹಿಡಿಯಬೇಕಲ್ಲವೇ ಎಂದು ಪ್ರಶ್ನಿಸಿದರು.
ವಿಕಾಸ್ (ವಿಕ್ಕಿ) ಅನುಮಾಸ್ಪದ ಸಾವಿನ ಬಗ್ಗೆ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸ್ಟಿಂಗ್ ಮಾಡಿದ ಆ ವ್ಯಕ್ತಿಯ ಸಂಸ್ಥೆಯಲ್ಲಿ ಆಗಿರುವ ಘಟನೆ ಬಗ್ಗೆ ಗೃಹ ಸಚಿವರು ದಾಖಲೆ ಕೇಳುತ್ತಾರೆ. ಲಿಫ್ಟ್ ಬಿದ್ದು ಈ ಸಾವು ಆಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಸರಿಯಾದ ತನಿಖೆ ನಡೆಸದೆ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಿದ್ದಾರೆ. ಈ ಪ್ರಕರಣ ಮುಚ್ಚಿ ಹಾಕುವುದರಲ್ಲಿ ಸರಕಾರ ,ಪೊಲೀಸರು ಕೂಡ ಶಾಮೀಲಾಗಿದ್ದಾರೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.
ಸ್ಟಿಂಗ್ ಪಿನ್ ನಡೆಸುತ್ತಿರುವ ಮಾಧ್ಯಮ ಸಂಸ್ಥೆಯಲ್ಲಿ ಅನೇಕ ಅಕ್ರಮಗಳು, ಅಪರಾಧಗಳು ನಡೆದಿವೆ. ಎಷ್ಟೋ ಕೊಲೆಗಳು ಕೂಡ ಆಗಿವೆ. ಕೋಲಾರ ಬಳಿ ಒಬ್ಬ ಡ್ರೈವರ್ ಕೊಲೆ ಆಗಿದೆ. ಆ ಪ್ರಕರಣದ ಮಾಹಿತಿಗಳು ನನಗೆ ಬರುತ್ತಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಯತೀಂದ್ರ ಅವರು ಏನು ಹೇಳಿದ್ದಾರೆ ಎಂಬುದನ್ನು ಗೃಹ ಮಂತ್ರಿ ಕೇಳಿಲ್ಲವೇ? ಸಿದ್ದರಾಮಯ್ಯ ಅವರು ಹೇಳಿದ್ದನ್ನು ಕೂಡ ಅವರು ಕೇಳಿರಬೇಕಲ್ಲವೇ? ಕಾಂಗ್ರೆಸ್ ಪಕ್ಷದ ನಾಯಕಿ ಒಬ್ಬರು ಸ್ಟಿಂಗ್ ನಲ್ಲಿ ಇದ್ದಾರೆ ಎಂದು ಅವರು ಹೇಳಿಲ್ಲವೇ? ಇಷ್ಟೆಲ್ಲಾ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಸ್ಟಿಂಗ್ ಆಪರೇಷನ್ ವೀಡಿಯೊಗಳನ್ನು ನೋಡಿರುವುದಿಲ್ಲವೇ? ಹಾಗಾದರೆ ಅವರು ಯಾರನ್ನು, ಯಾರ ಒತ್ತಡ, ಆದೇಶದ ಮೇರೆಗೆ ರಕ್ಷಣೆ ಮಾಡುತ್ತಿದ್ದಾರೆ ಎಂಬುದನ್ನು ಹೇಳಬೇಕು ಎಂದು ಒತ್ತಾಯಿಸಿದರು.
