(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಬುದ್ಧ, ಬಸವ ಮತ್ತು ಅಂಬೇಡ್ಕರ್ ಎಂಬ ಮೂರು ಜ್ಯೋತಿಗಳು ಬೆಳಗಿದರೆ ಇಡೀ ದೇಶವೇ ಬೆಳಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಚಾಮರಾಜನಗರದಲ್ಲಿ ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನ 2026ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಲ್ಲ ಜೀವಿಗಳು ಸುಖವಾಗಿರಲಿ ಎಂಬುದೇ ಬುದ್ಧನ ಮುಖ್ಯ ಮಾರ್ಗದರ್ಶನವಾಗಿದೆ.
ವಿಶ್ವಕ್ಕೆ ಶಾಂತಿಯ ಸಂದೇಶ ಹಾಗೂ ಸಮಾಜಕ್ಕೆ ಸಮಾನತೆಯ ಸಂಕಲ್ಪವೇ ಬೌದ್ಧ ಧರ್ಮದ ಮೂಲ ಆಶಯವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಡೀ ಪ್ರಪಂಚವನ್ನು ಸುತ್ತಿ, ಆಳವಾಗಿ ಅಧ್ಯಯನ ಮಾಡಿದ ಬಳಿಕವೇ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು ಎಂದು ಅವರು ತಿಳಿಸಿದರು.
ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆಯೂ ಅಷ್ಟೇ ಮುಖ್ಯ. ಸಂವಿಧಾನ ಮತ್ತು ಬೌದ್ಧ ಧರ್ಮವೇ ನಮ್ಮ ಸಮಾಜಕ್ಕೆ ನಿಜವಾದ ಅಡಿಪಾಯ. ನಮಗೆ ಯಾರೂ ಜಾತಿ ಕೇಳುವ ಸಮಾಜ ಬೇಡ, ಬದಲಿಗೆ ಜ್ಞಾನವನ್ನು ಕೇಳುವ ಸಮಾಜ ಬೇಕು. ಪ್ರತಿಯೊಬ್ಬರ ಬದುಕಿಗೂ ಅವರೇ ದೀಪವಾಗಬೇಕು ಮತ್ತು ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.ಮುಂದಿನ ವರ್ಷದ ವಿಶ್ವ ಬೌದ್ಧ ಸಮ್ಮೇಳನವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಅಥವಾ ರಾಮನಗರದಲ್ಲಿ ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಲ್ಲೂ ಸಮ್ಮೇಳನ ನಡೆಸಬೇಕೆಂದು ಕೋರಿದ್ದಾರೆ. ಅದಕ್ಕೆ ನಮ್ಮ ತಕರಾರಿಲ್ಲ, ಬೇಕಿದ್ದರೆ ವರ್ಷಕ್ಕೆ ಒಂದಲ್ಲ, ಎರಡು ಬಾರಿ ಇಂತಹ ಸಮ್ಮೇಳನಗಳನ್ನು ಮಾಡೋಣ ಎಂದು ಸಿಎಂ ಹೇಳಿದರು.
ಅಧಿಕಾರ ಎನ್ನುವುದು ಜನರಿಗೆ ಸೇವೆ ಮಾಡಲು ಇರಬೇಕೇ ಹೊರತು ಅಹಂಕಾರಕ್ಕಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ. ಮಾಜಿ ರಾಜ್ಯಪಾಲರಾದ ದಿವಂಗತ ರಾಚಯ್ಯನವರು ಭೂಮಿ ನೀಡಿದ್ದರೂ ಹಲವರಿಗೆ ಇನ್ನೂ ಸಾಗುವಳಿ ಚೀಟಿ ಸಿಕ್ಕಿರಲಿಲ್ಲ. ನಮ್ಮ ಸರ್ಕಾರ ಪ್ರತಿಯೊಬ್ಬರಿಗೂ ವಸತಿ, ಹಕ್ಕುಪತ್ರ ಹಾಗೂ ಪೋಡು ಮಾಡಿಸಿ ದಾಖಲೆಗಳನ್ನು ನೀಡುವ ಕೆಲಸ ಮಾಡುತ್ತಿದೆ. ಬಡವರಿಗೆ ಒಟ್ಟು 10 ಲಕ್ಷ ಸೈಟ್ಗಳನ್ನು ಹಂಚಿಕೆ ಮಾಡುವ ಕಾರ್ಯ ಭರಾಟೆಯಿಂದ ಸಾಗುತ್ತಿದೆ ಎಂದರು.ಭೂಮಿ ಕೊಟ್ಟಿದ್ದು, ವಿದ್ಯುತ್ ನೀಡಿದ್ದು ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದ್ದು ಯಾರು ಎಂದು ಪ್ರಶ್ನಿಸಿದ ಡಿ.ಕೆ. ಶಿವಕುಮಾರ್, ಇದು ಕೇವಲ ಕಾಂಗ್ರೆಸ್ ಸರ್ಕಾರ ಮಾತ್ರವಲ್ಲ, ಇದು ಸಂಪೂರ್ಣವಾಗಿ ಜನರ ಸರ್ಕಾರ ಎಂದು ಬಣ್ಣಿಸಿದರು. ತಾವು ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ ರೆಹಮಾನ್ ಅವರ ಕೈಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೀಠಿಕೆಯನ್ನು ಓದಿಸಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಈ ವೇಳೆ ಅವರು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ, ಮೂರನೇ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನವನ್ನು ಮುಖ್ಯಮಂತ್ರಿ ಅವರ ತವರು ಜಿಲ್ಲೆಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಅವರ ಮನವಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮೌಡ್ಯ ಬದಿಗೊತ್ತಿದ ಡಿಕೆಶಿ:
ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯವನ್ನು ಬದಿಗೊತ್ತಿ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರಕ್ಕೆ ಭೇಟಿ ನೀಡಿದ್ದಾರೆ.
ಬುದ್ಧನ ಪ್ರತಿಮೆ, ಬೋಧಿವೃಕ್ಷ ಹಾಗೂ ಪುಸ್ತಕಗಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಡಿ.ಕೆ. ಶಿವಕುಮಾರ್ ಅವರು, ಧಮ್ಮ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ನರೇಂದ್ರಸ್ವಾಮಿ ಉಪಸ್ಥಿತರಿದ್ದರು.
