ಮೈಸೂರು: ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಬದಲಾವಣೆಗೆಗೆ ಕೊಡುಗೈ ದಾನಿಗಳ ಸಹಾಯ ಮೊದಲ ಹೆಜ್ಜೆಯಾಗಲಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್ ತಿಳಿಸಿದರು.
ನಗರದ ವಿದ್ಯಾರಣ್ಯಪುರಂನಲ್ಲಿರುವ ಹೊಸ ಇಟ್ಟಿಗೆಗೂಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವಿದ್ಯಾರ್ಥಿಗಳಿಗೆ ಅಪೂರ್ವ ಸ್ನೇಹ ಬಳಗ ಹಾಗೂ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಉಚಿತ ಟ್ರ್ಯಾಕ್ ಸೂಟ್ ವಿತರಿಸಿ ಅವರು ಮಾತನಾಡಿದರು.
ಜ್ಞಾನಾರ್ಜನೆಯ ದಾಹವಿರುವ ಮಕ್ಕಳು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ ಸಹ ಓದಿ ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಪ್ರತಿಭಾವಂತರಾಗುತ್ತಾರೆ, ಆದರೂ ಕನಿಷ್ಟ ಅನುಕೂಲ ಹಾಗೂ ಸೌಕರ್ಯಗಳನ್ನು ಪಠ್ಯಕ್ಕೆ ಪೂರಕವಾದ ಸಾಮಗ್ರಿಗಳನ್ನು ನೀಡುವ ಮೂಲಕ ನಾವು ಉತ್ತೇಜನ ನೀಡಬೇಕು ಎಂದು ಹೇಳಿದರು.
ಈ ನಿಟ್ಟಿನಲ್ಲಿ ದುಡಿಯುತ್ತಿರುವ ಯುವ ಸಮೂಹವು ಇಂತಹ ಸರ್ಕಾರಿ ಶಾಲೆಗಳ ಬಡಮಕ್ಕಳ ಶಿಕ್ಷಣಕ್ಕೆ ಉದಾರವಾಗಿ ದಾನ ಮಾಡುವ ಹಾಗೂ ಶಿಕ್ಷಣಕ್ಕೆ ಬೆಂಬಲಿಸುವ ಚಿಂತನೆ ಮಾಡಬೇಕಿದೆ ಎಂದು ಕರೆ ನೀಡಿದರು.
ಸರ್ಕಾರಿ ಶಾಲೆಗಳ ಆಮೂಲಾಗ್ರ ಬದಲಾವಣೆಗೆ ಸರ್ಕಾರ ಹೆಚ್ಚು ಚಿಂತನೆ ನಡೆಸಿ ಉತ್ತಮ ಯೋಜನೆಗಳನ್ನು ರೂಪಿಸಬೇಕಿದೆ ಎಂದ ಅವರು ಶಾಲೆಗಳಲ್ಲಿ ಉತ್ತಮ ವಾತಾವರಣ ಮೂಡಿಸಬೇಕಾದರೆ ದಾನಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್, ಉದ್ಯಮಿ ಜಯರಾಮ್,ಸಮಾಜ ಸೇವಕರಾದ ದೂರ ರಾಜಣ್ಣ, ಸಂದೇಶ್, ಜತ್ತಿ ಪ್ರಸಾದ್, ಶಿಕ್ಷಕರಾದ ಸಂಧ್ಯಾ ರಾಣಿ, ಸಹ ಶಿಕ್ಷಕಿ ತಸಿರ ಬೇಗ್ ಮತ್ತಿತರರು ಹಾಜರಿದ್ದರು.
