(ವರದಿ: ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಸಮಾಜ ಕಲ್ಯಾಣ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ ಅವರು ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸಿ ಆಹವಾಲು ಆಲಿಸಿದರು.
ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಚಿಕ್ಕಲ್ಲೂರು ಕ್ಷೇತ್ರವನ್ನು ಪ್ರಾಧಿಕಾರ ಮಾಡಲು ನಿರ್ಧಾರ ತೆಗೆದು ಕೊಂಡಿರುವ ಹಿನ್ನೆಲೆಯಲ್ಲಿ ಚಿಕ್ಕಲೂರಿಗೆ ಸಚಿವರು ಭೇಟಿ ನೀಡಿದರು.
ಮೊದಲು ಕ್ಷೇತ್ರದ ಅದಿ ದೈವ ಶ್ರೀಸಿದ್ದಪ್ಪಾಜಿ ದೇವಾಲಯಕ್ಕೆ ಭೇಟಿ ನೀಡಿ, ಗದ್ದುಗೆಯ ದರ್ಶನ ಪಡೆದು ನಂತರ ಕ್ಷೇತ್ರವನ್ನು ಪರಿಶೀಲಿಸಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದು, ಸಾರ್ವಜನಿಕರ ಕುಂದುಕೊರತೆ ವಿಚಾರಿಸಿ ಆಹವಾಲು ಆಲಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಬಸವಣ್ಣನವರ ಸಾಮಾಜಿಕ ಚಳವಳಿಯ ಹೂರಣ ಈ ಪ್ರದೇಶದಲ್ಲಿನ ನೀಲಗಾರರ ಪರಂಪರೆಯಲ್ಲಿ ಅಡಗಿದೆ. ರಾಚಪ್ಪಾಜಿ, ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಿ ಬದಲಾವಣೆಗೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಆರಂಭಿಸಿದ ಚಳವಳಿಯ ಕಿಡಿಯನ್ನು ಆರದಂತೆ ನಾವು ನೋಡಿಕೊಳ್ಳಬೇಕಿದೆ ಎಂದು ಸಚಿವರು ಸಲಹೆ ನೀಡಿದರು.
ವಚನಕಾರರು, ಸಾಧಕರು ಮನುಕುಲದ ಉದ್ಧಾರಕ್ಕೆ ತ್ಯಾಗ ಮಾಡಿದ್ದಾರೆ. ಎಲ್ಲ ಸಮುದಾಯಗಳು ಒಗ್ಗಟ್ಟಾಗಿ ಸಹೋದರರಂತೆ ಸೌಹಾರ್ದವಾಗಿ ಬದುಕುವ ಮೂಲಕ ವಚನಕಾರರ, ಸಾಧಕರ ಸಂದೇಶವನ್ನು ಕಾರ್ಯರೂಪಕ್ಕೆ ತರಬೇಕಿದೆ ಎಂದು ಮಹದೇವಪ್ಪ ಹೇಳಿದರು.
ಐತಿಹಾಸಿಕ ಸಂಗತಿಗಳನ್ನು ರಕ್ಷಣೆ ಮಾಡಲು ಹಾಗೂ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ಪ್ರಾಧಿಕಾರ ರಚನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರು, ರಸ್ತೆಯಂತಹ ಮೂಲ ಸೌಲಭ್ಯಗಳನ್ನು ಒದಗಿಸುವುದೇ ಪ್ರಾಧಿಕಾರದ ಆದ್ಯತೆಯಾಗಿದೆ.ಚಿಕ್ಕಲ್ಲೂರು ರಸ್ತೆಯನ್ನು ಕ್ಷೇತ್ರ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು,ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ಸಚಿವ ಡಾ. ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.
ಜಿಲ್ಲೆಯ ವಿವಿಧ ಮುಖಂಡರು ಸಚಿವರ ಭೇಟಿಯ ವೇಳೆ ಹಾಜರಿದ್ದರು.
