ಬೆಂಗಳೂರು: ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಯಾದರೆ ದೇಸಿ ಕಲೆಗಳಿಗೆ ಮರು ಜೀವ ದೊರಕಿದಂತಾಗುತ್ತದೆ,ಇದನ್ನು ಜಾರಿ ಮಾಡಬೇಕು ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಇಸಿಸಿಆರ್ ಸದಸ್ಯ
ಡಾ ಎಸ್ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.

ಕನ್ನಡ ಜಾನಪದ ಪರಿಷತ್ ಶಾಂತಿನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ
ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಕನ್ನಡ ಜಾನಪದ ಪರಿಷತ್ ದಶಮಾನೋತ್ಸವ ಅಂಗವಾಗಿ 55 ಸಾಧಕರಿಗೆ ಬಸವ ಪ್ರಶಸ್ತಿ,ನಾಡೊಜ ಎಸ್ ಕೆ ಕರೀಂ ಖಾನ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಯುವ ಜನತೆಯ ಮೇಲಿದೆ, ಜಾನಪದ ಒಂದು ಅಲೌಕಿಕ ಸಂವಿಧಾನ, ಇದಕ್ಕೆ ಗಡಿ ಹಾಗೂ ಇತಿಮಿತಿ ಇಲ್ಲ, ಚೌಕಟ್ಟಿಲ್ಲ, ಇದು ಎಂದೂ ನಶಿಸುವುದಲ್ಲ ಪರಿವರ್ತನೆಗೊಳ್ಳುತ್ತಾ ಮುಂದಿನ ಪೀಳಿಗೆಗೆ ವರ್ಗಾಯಿಸಿಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

ದಶಮಾನೋತ್ಸವದ ಅಂಗವಾಗಿ ರಾಜ್ಯದ್ಯಂತ ಮೂಲ ಜನಪದ ಹಾಗೂ ಬುಡಕಟ್ಟು ಕಲಾವಿದರನ್ನು, ವಿದ್ವಾಂಸರನ್ನು, ಜನಪದ ಸಂಘಟಕರನ್ನು ಗೌರವಿಸಲಾಗುವುದು ಎಂದು ಡಾ.ಎಸ್ ಬಾಲಾಜಿ ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ರಫೀಕ್ ಪಾಶ ಮಾತನಾಡಿ,ಜಾನಪದ ಎಲ್ಲಾ ಧರ್ಮ ಹಾಗೂ ಭಾಷೆಗಳಲ್ಲಿದೆ, ಇದನ್ನು ಅರ್ಥೈಸಿಕೊಂಡು ಯುವಜನತೆ ಮುನ್ನಡೆಯಬೇಕೆಂದು ಸಲಹೆ ನೀಡಿದರು.

ಜನಪದ ಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಅಂತರಾಷ್ಟ್ರೀಯ ಕಲಾವಿದ ಡಾ ಅಪ್ಪಗೆರೆ ತಿಮ್ಮರಾಜು ಮಾತನಾಡಿ ಜಾನಪದ ಮೌಖಿಕ ಪರಂಪರೆಯ ಅವಲೋಕನವನ್ನು ಎಲ್ಲರೂ ಮಾಡಬೇಕು ಇದರಲ್ಲಿ ನೀತಿ ಹಾಗೂ ಬದ್ಧತೆ ಇದೆ, ಜಾನಪದ ಒಪ್ಪಿಕೊಳ್ಳುವ ಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು
ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರದರ್ಶನ ಕಲೆಯನ್ನು ಕಲಿತು ಮುನ್ನಡೆಯಬೇಕೆಂದು ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು ಕಂಸಾಳೆ ಪ್ರದರ್ಶಿಸಿದರು, ಶಶಿಕುಮಾರ್ ಮತ್ತು ತಂಡದವರು ಗೊರವನ ಕುಣಿತ ಪ್ರದರ್ಶಿಸಿದರು, ಜನಪದ ಗಂಗಣ್ಣ, ಅಶ್ವಥ್ ಜಿಎಸ್, ಶ್ರೀಧರ್ ಜನಪದ ಗೀತೆಗಳನಯ ನಡೆಸಿಕೊಟ್ಟರು.
30 ಸಾಧಕರಿಗೆ ಬಸವ ಪ್ರಶಸ್ತಿ 25 ಸಾಧಕರಿಗೆ ನಡೊಜ ಎಸ್ ಕೆ ಕರೀಂ ಖಾನ್ ಪ್ರಶಸ್ತಿ
ಪ್ರದಾನ ಮಾಡಲಾಯಿತು.

ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಡಾ ರಿಯಾಜ್ ಪಾಷಾ, ಕಾರ್ಯದರ್ಶಿ ಡಾ ರತ್ನಕುಮಾರಿ ಬಿ, ಪತ್ರಕರ್ತ
ಗಂಡ್ಸಿ ಶಿವಾನಂದ ಸ್ವಾಮಿ, ವಿಭಾಗೀಯ ಸಂಚಾಲಕ ಎ.ಪಿ ಕುಮಾರ್, ರಾಮನಗರ ಜಿಲ್ಲಾಧ್ಯಕ್ಷ ಕೆ ಸಿ ಕಾಂತಪ್ಪ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷೆ ವಿಶಾಲಕ್ಷಮ್ಮ,ಮಂಡ್ಯ ಜಿಲ್ಲಾಧ್ಯಕ್ಷ ವಿಜಯ್ ಕೊಪ್ಪ, ಬೆಂಗಳೂರು ಶಾಂತಿನಗರ ವಿಧಾನಸಭಾ ಕ್ಷೇತ್ರ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಮಂಜುನಾಥ್, ಗೋವಿಂದರಾಜನಗರ ಅಧ್ಯಕ್ಷ ನರಸಿಂಹಮೂರ್ತಿ, ವಿಜಯನಗರ ಅಧ್ಯಕ್ಷ ಉಮೇಶ್ ಚಂದ್ರ ಮತ್ತಿತರರು ಉಪಸ್ಥಿತರಿದ್ದರು.
